

ವಿಜಯಪುರ: ನಗರದಲ್ಲಿ ಯಾವ ಕಾರಣಕ್ಕೂ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಶಾಸಕರ ಸಾರ್ವಜನಿಕ ಜನಸಂಪರ್ಕ ಕಾರ್ಯಾಲಯದಲ್ಲಿ ಸೋಮವಾರ ನಡೆದ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ, ಕೆಬಿಜೆಎನ್‌ಎಲ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮುಂಬರುವ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಆಗದಂತೆ ನಗರದಲ್ಲಿರುವ ಕೊಳವೆ ಬಾವಿಗಳ ದುರಸ್ತಿ, ತೆರೆದ ಬಾವಿಗಳ ಸ್ವಚ್ಚತೆ, ಮೋಟರ್ ಅಳವಡಿಕೆ ಮತ್ತಿತರ ಸಮಸ್ಯೆ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರಾತ್ರಿ ಸಮಯದಲ್ಲಿ ಮನೆಗಳಿಗೆ ನೀರು ಬಿಟ್ಟರೆ, ತುಂಬಿಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ಜನರಿಗೆ ಅನುಕೂಲವಾಗುವಂತೆ ಮರು ವೇಳಾಪಟ್ಟಿ ಸಿದ್ದಪಡಿಸಬೇಕು. ವಲಯವಾರು ಶಾಸಕರು, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಒಳಗೊಂಡ ವಾಟ್ಸಪ್ ಗ್ರೂಪ್ ರಚಿಸಿ, ಅಲ್ಲಿ ವೇಳಾಪಟ್ಟಿ ಮತ್ತು ಸಮಸ್ಯೆಗಳ ಕುರಿತಂತೆ ಚರ್ಚಿಸಬೇಕು. ವಿಳಂಬ ಮಾಡದೆ, ಸಣ್ಣ ಪುಟ್ಟ ಸಮಸ್ಯೆ ಗಳನ್ನು ತಕ್ಷಣ ಪರಿಹರಿಸಬೇಕು ಎಂದು ಹೇಳಿದರು.
ನಗರದ ಯಾವ ಭಾಗದಲ್ಲಿ ಓವರ್ ಹೆಡ್ ಟ್ಯಾಂಕ್‌ಗಳ ಅವಶ್ಯಕತೆ ಕುರಿತಂತೆ ಪ್ರಸ್ತಾವನೆ ನೀಡಿ. ತಾಜ್‌ಬಾವಡಿ ಬಳಿ ನೀರು ಶುದ್ದೀಕರಣ ಘಟಕ ಸ್ಥಾಪಿಸಲು ಟೆಂಡರ್ ಕರೆಯಿರಿ. ಇಲ್ಲಿಯ ನೀರು ಬಳಕೆಗೆ ಅನುಕೂಲ ಆಗುತ್ತದೆ. ಆಗ ಕುಡಿಯುವ ನೀರಿನ ಕೊರತೆ ತಪ್ಪಿಸಲು ನೆರವಾಗಲಿದೆ ಎಂದರು.
ಅನಧಿಕೃತವಾಗಿ ನಲ್ಲಿಗಳ ಜೋಡಣೆ, ಮೀಟರ್ ಕಿತ್ತಿದವರ ನೀರಿನ ಲೈನ್ ಕಡಿತ ಮಾಡಬೇಕು. ಅನಾವಶ್ಯಕವಾಗಿ ನೀರು ಹಾಳು ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ. ನೀರಿನ ಬಿಲ್ ತುಂಬಿಸಿಕೊಳ್ಳಬೇಕು. ಯಾವ ಇಲಾಖೆ ನೀರಿನ ಬಿಲ್ ಬಾಕಿ ಉಳಿಸಿಕೊಂಡಿವೆ ಎಂಬುದರ ಬಗ್ಗೆ ಮಾಹಿತಿ ನೀಡಿ, ಕೆಡಿಪಿ ಸಭೆಯಲ್ಲಿ ಗಮನ ಸೆಳೆಯುವೆ ಎಂದರು.
ನಗರದಲ್ಲಿ ಗುಣಮಟ್ಟದ ಸಿಸಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಬೇರೆ ಕಾಮಗಾರಿಗಳ ಹೆಸರಿನಲ್ಲಿ ಅಗೆಯಬಾರದು. ಅನಿವಾರ್ಯ ಇದ್ದರೆ ಸಂಬಂಧಿಸಿದವರಿಂದ ಅನುಮತಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಅಲ್ಲದೆ, ಹಾಳಾದ ರಸ್ತೆ ದುರಸ್ತಿ ಅವರೇ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಂತರ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸ್ಥಳದಲ್ಲೇ ಕೆಲ ಸಮಸ್ಯೆಗಳನ್ನು ಪರಿಹರಿಸಿದರೆ, ಉಳಿದವು ಪರಿಹಾರಗೊಳಿಸುವ ಭರವಸೆ ನೀಡಿದರು. ಇದೇ ವೇಳೆ ಅಭಿಮಾನಿಗಳು ಶಾಸಕರಿಗೆ ಸನ್ಮಾನಿಸಿದರು.
ಕೆಬಿಜೆಎನ್‌ಎಲ್ ವತಿಯಿಂದ ಲಿಂಗದಳ್ಳಿ ಜಾಕವೆಲ್ದಿಂದ ಭೂತನಾಳ ಕೆರೆ ತುಂಬಿಸುವ ಕಾರ್ಯಕ್ಕೆ ವಿದ್ಯುತ್ ಸಮಸ್ಯೆ ಆಗುವುದು ಸಭೆಯಲ್ಲಿ ಗಮನಕ್ಕೆ ಬರುತ್ತಿದ್ದಂತೆ, ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ, ವಿದ್ಯುತ್ ಕಡಿತಗೊಳಿಸದಂತೆ ಶಾಸಕ ಯತ್ನಾಳ ಸೂಚನೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪರಶುರಾಮ ರಜಪೂತ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಎಂ.ಎಸ್.ಕರಡಿ, ರಾಹುಲ್ ರಜಪೂತ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಮಲ್ಲಿಕಾರ್ಜುನ ಗಡಗಿ, ರಾಜಶೇಖರ ಕುರಿಯವರ, ಮಳುಗೌಡ ಬಿರಾದಾರ, ವಿಠ್ಠಲ ಹೊಸಪೇಟ, ಮಹೇಶ ಒಡೆಯರ, ಕಣಮುಚನಾಳ, ರಾಜು ಚವ್ಹಾಣ, ಅಶೋಕ ಬೆಲ್ಲದ, ವಿಠ್ಠಲ ನಡುವಿನಕೇರಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಎಇಇ ಪಟ್ಟಣಶೆಟ್ಟಿ ಮತ್ತಿತರರು ಇದ್ದರು.