ಬೇಲೂರು ದೇವಾಲಯಕ್ಕೆ ಯುನೆಸ್ಕೊ ಭೇಟಿ

ಬೇಲೂರು ದೇವಾಲಯಕ್ಕೆ ಯುನೆಸ್ಕೊ ಭೇಟಿ
Published on

ಬೇಲೂರು : ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಬೇಲೂರು-ಹಳೇಬೀಡು-ಸೋಮನಾಥಪುರ ದೇಗುಲಗಳನ್ನು ಕೇಂದ್ರ ಸರ್ಕಾರ ನಾಮ ನಿರ್ದೇಶನ ಮಾಡಿದ್ದ ಹಿನ್ನೆಲೆಯಲ್ಲಿ ಯುನೆಸ್ಕೊ ಸಲಹಾ ಸಲಹಾ ಸಮಿತಿ ಮುಖ್ಯಸ್ಥ ಟಿಯಾಂಗ್ ಕಿಯಾನ್ ಬೂನ್ ಮತ್ತು ಪ್ರಾಚ್ಯವಸ್ತು ತಜ್ಞರ ತಂಡ ಗರುವಾರ ಬೇಲೂರು ಚನ್ನಕೇಶವಸ್ವಾಮಿ ದೇಗುಲ, ವಿಷ್ಣು ಸಮುದ್ರ ಕೆರೆ, ಹಾಗೂ ಅಕ್ಕಪಕ್ಕದ ಐತಿಹಾಸಿಕ ಚಿಕ್ಕಪುಟ್ಟ ದೇಗುಲಕ್ಕೆ ಭೇಟಿನೀಡಿ ವೀಕ್ಷಿಸಿ ಮಾಹಿತಿ ಪಡೆದರು.

ಯುನೆಸ್ಕೊ ಸಲಹಾ ಸಮಿತಿ ಮುಖ್ಯಸ್ಥ ಟಿಯಾಂಗ್ ಕಿಯಾನ್ ಬೂನ್(ಚೋ ಕಿಯಾ ಬೂ) ಮತ್ತು ಪ್ರಾಚ್ಯವಸ್ತು ತಜ್ಞರ ತಂಡ ಗರುವಾರ ದೇಗುಲಕ್ಕೆ ಆಗಮಿಸಿದ ಸಂದರ್ಭ ದೇಗುಲದ ಆಡಳಿತ ಮಂಡಳಿ ಸಂಪ್ರದಾಯದಂತೆ ಪೂರ್ಣ ಕುಂಬದ ಸ್ವಾಗತದೊಂದಿಗೆ ದೇಗುಲಕ್ಕೆ ಬರ ಮಾಡಿ ಕೊಳ್ಳಲಾಯಿತು. ದೇವರ ದರ್ಶನ ಪಡೆದ ಯುನೆಸ್ಕೋ ತಂಡ ದೇಗುಲದ ಗರ್ಭಗುಡಿಗೆ ತೆರಳುವ ಮಹಾ ದ್ವಾರದಲ್ಲಿನ ಕೆತ್ತ, ಗರ್ಭಗುಡಿ ಮುಂಭಾಗದಲ್ಲಿರುವ ನವರಂಗ, ಓಳ ಭಾಗದಲ್ಲಿನ ವಿವಿಧ ಮಾದರಿಯ ಕಲ್ಲಿನ ಕಂಭಗಳಲ್ಲಿನ ಕುಸುರಿ ಕೆತ್ತನೆಯ ನೈಪುಣ್ಯತೆ ಬಗ್ಗೆ ಆಶ್ಚರ್ಯ ವ್ಯಕ್ತ ಪಡಿಸಿದರು. ನಂತರ ಯಾಗಶಾಲೆಗೆ ತೆರಳಿದ ಯುನೆಸ್ಕೊ ಪ್ರತಿನಿಧಿಗಳು ಶ್ರೀರಾಮ ದೇವರ ಮೂರ್ತಿ, ಕಪ್ಪೆ ಚನ್ನಿಗರಾಯ ದೇಗುಲದ ಕಲ್ಲಿನಿಂದ ಕೆತ್ತಿರುವ ಮಹಿಷ ಮರ್ಧಿ, ಚಾಮುಂಡಿ, ಸರಸ್ವತಿ ವಿಗ್ರಹಗಳನ್ನು ತದೇಕಚಿತ್ತದಿಂದ ವೀಕ್ಷಿಸಿದರು.

ಅಲ್ಲದೆ ದೂರದಿಂದಲೇ ತಮ್ಮ ಕ್ಯಾಮೆರ ಮೂಲಕ ಚನ್ನಕೇಶವ ದೇಗುಲ ಮತ್ತು ದೊಡ್ಡದಾದ ಏಕಶಿಲಾ ದ್ವಿಪ ಸ್ತಂಭವನ್ನು ಸೆರೆ ಹಿಡಿದು ಸುಂದರವಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು. ನಂತರದಲ್ಲಿ ಚನ್ನಕೇಶವ ದೇಗುಲದ ಹೊರ ಆವರಣದ ಗೋಡೆಗಳ ಮೇಲೆ ಕೆತ್ತಿರುವ ಸುಂದರ ಶಿಲ್ಪಕಲೆಗಳ ಬಗ್ಗೆ ಮಾರ್ಗದರ್ಶಿಯಿಂದ ಮಾಹಿತಿ ಪಡೆದು ವೀಕ್ಷಿಸಿದರು. ಈ ಸಂದರ್ಭದಲ್ಲಿ ದೇಗುಲದಲ್ಲಿ ಆಕರ್ಶಿತವಾಗಿದ್ದ ಶ್ರೀಕೃಷ್ಣನು ಪರ್ವತವನ್ನು ಎತ್ತುವ ಸನ್ನಿವೇಶ, ಮಹಾ ಭಾರತ ಮತ್ತು ರಾಮಯಾಣ ಕಥೆ ಸಾರುವ ಶಿಲ್ಪಕಲೆ, ಪ್ರಮುಖವಾಗಿ ದೇಗುಲದಲ್ಲಿ ಆಕರ್ಷಕವಾಗಿ ಮತ್ತು ಸುಂತರವಾಗಿ ಕಾಣುವ ದೇಗುಲಕ್ಕೆ ಮೆರಗು ನೀಡುವ ಶಿಲಾ ಬಾಲಿಕೆಯರ ಹಾವಬಾವಗಳ ಬಗೆಗಿನ ಮಾಹಿತಿಯನ್ನು ಅಧಿಕಾರಿಗಳಿಂದ ಸಂಗ್ರಹಿಸಿದರು. ಅಲ್ಲದೆ ದೇಗುಲದ ಈಶಾನ್ಯ ಭಾಗದಲ್ಲಿರುವ ಕಲ್ಯಾಣಿ ಮತ್ತು ಮುಂಭಾಗಿಲಿನಲ್ಲಿರುವ ಬೃಹದಾಕಾರದ ರಾಜ ಗೋಪುರ ವೀಕ್ಷೀಸಿ, ಗೋಪುರದಲ್ಲಿನ ಅಸ್ವಚ್ಛತೆ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳಿಂದ ಚರ್ಚೆ ನಡೆಸಿದರು.

ದೇಗುಲದ ಕಲಾ ಸೌಂದರ್ಯ ಮತ್ತು ಕಲಾ ನೈಪುಣ್ಯತೆ ಬಗ್ಗೆ ಸಂತೋಷ ವ್ಯಕ್ತ ಪಡಿಸಿದ್ದಲ್ಲದೆ, ಪಟ್ಟಣ ಸಮೀಪದ ಐತಿಹಾಸಿವಾದ ವಿಷ್ಣು ಸಮುದ್ರ ಕೆರೆ ಹಾಗೂ ಕಲ್ಯಾಣಿಯನ್ನು ವೀಕ್ಷಿಸಿದರು. ನಂತರ ಬೇಲೂರು ಪಟ್ಟಣದ ಸಂಪೂರ್ಣ ನೀಲಿನಕ್ಷೆ ಪರಿಶೀಲಸಿದರು.

ದೇಗುಲದಲ್ಲಿನ ಶಿಲ್ಪಕಲೆ ವೀಕ್ಷಿಸಿ ಮಾತನಡಿದ ಯುನೆಸ್ಕೊ ಸಲಹಾ ಸಲಹಾ ಸಮಿತಿ ಮುಖ್ಯಸ್ಥ ಟಿಯಾಂಗ್ ಕಿಯಾನ್ ಬೂನ್(ಚೋ ಕಿಯಾ ಬೂ) ಚನ್ನಕೇಶವಸ್ವಾಮಿ ದೇಗುಲ ಯುನೆಸ್ಕೋ ಪಟ್ಟಿಗೆ ಆಯ್ಕೆಗೊಂಡರೆ ದೇಗುಲದಲ್ಲಿ ನಡೆಯುತ್ತಿರುವ ಧಾರ್ಮಿಕ ಆಚರಣೆಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಯುನೆಸ್ಕೋ ಪಟ್ಟಿಗೆ ಸೇರಿದ ನಂತರ ಮೂಲಭೂತ ಸೌಕರ್ಯಗಳು ಹೆಚ್ಚಾಗಲಿದ್ದು ಪ್ರವಾಸಿಗರು, ಸ್ಥಳಿಯರಿಗೆ ಕಾನೂನಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿಶ್ವ ಭೂಪಟದಲ್ಲಿ ಬೇಲೂರು ದೇಗುಲ ಗುರುತಿಸಿ ಕೊಳ್ಳಲಿದ್ದು ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ವಿಶ್ವದಲ್ಲಿ 1154 ಮಾನ್ಯುಮೆಂಟ್‌ಗಳು ಯುನೆಸ್ಕೋ ಪಟ್ಟಿಯಲ್ಲಿವೆ ಎಂದರು.

ಯುನೆಸ್ಕೋ ತಂಡದೊಂದಿಗೆ ದೇಗುಲ ವೀಕ್ಷಿಸಿ ಮಾತನಾಡಿದ ಪ್ರವಾಸೋಧ್ಯಮ ಟಾಸ್ಕ್‌ಪೋರ್ಸ್ ಸಮಿತಿ ಸದಸ್ಯೆ ಸುಧಾಮೂರ್ತಿ, ಯುನೆಸ್ಕೋ ತಂಡ ಇಲ್ಲಿನ ದೇಗುಲದ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಯಾದರೆ ದೊಡ್ಡ ಗರಿಮೆ ನಮ್ಮದಾಗಲಿದೆ. ಯುನೆಸ್ಕೋ ಪಟ್ಟಿಗೆ ಬೇಲೂರು ಸೇರ್ಪಡೆ ವಿಶ್ವದಲ್ಲಿ ಗುರುತಿಸಲ್ಪಟ್ಟು, ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರಿಂದ ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತವೆ ಎಂದರು.

ರಾಜ್ಯ ಪುರಾತತ್ವ ಇಲಾಖೆ ಆಯುಕ್ತ ದೇವರಾಜ್ ಮಾತನಾಡಿ, ಯುನೆಸ್ಕೋ ತಂಡ ಬೇಲೂರು-ಹಳೆಬೀಡು-ಸೋಮನಾಥಪುರ ದೇಗುಲಗಳನ್ನು ವೀಕ್ಷಿಸಿ, ವರದಿಯನ್ನು ಯುನೆಸ್ಕೋ ಸಂಸ್ಥೆಗೆ ಸಲ್ಲಿಸಲಿದೆ. ಮುಂದಿನ ವರ್ಷ ಈ ಮೂರು ಸ್ಥಳಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವ ಭರವಸೆಯಿದೆ. ಯುನೆಸ್ಕೋ ಪಟ್ಟಿಗೆ ಸೇರಿದ ನಂತರ ಇಲ್ಲಿ ಮೂಲಭೂತ ಸೌಕರ್ಯ ಹೆಚ್ಚಾಗಲಿದೆ ಎಂದರು.

ಕೇಂದ್ರ ಪುರಾತತ್ವ ಸರ್ವೆಕ್ಷಣಾ ಇಲಾಖೆಯ ಸಹಾಯಕ ಮಹಾ ನಿರ್ದೇಶಕ ಜಹಾನ್ವಿಜ್ ಶರ್ಮ, ನಿರ್ದೇಶಕ ಮದನ್‌ಸಿಂಗ್ ಚೌಹಾನ್, ಪ್ರಾದೇಶಿಕ ನಿರ್ದೇಶಕಿ ಮಹೇಶ್ವರಿ, ಪುರಾತತ್ವ ಅಧೀಕ್ಷಕ ಬಿಪಿನ್ ಚಂದ್ರನೇಗಿ, ಉಪಾಧೀಕ್ಷಕ ಸೋಮಾಲ ನಾಯಕ್, ಸಹಾಯಕ ಅಧಿಕ್ಷಕ ಗುರುಬಾಗಿ, ಸ್ಮಾರಕ ಸಂರಕ್ಷಣಾಧಿಕಾರಿ ಗೌತಮ್, ಪುರಾತತ್ವ ಪರಂಪರೆ ಇಲಾಖೆ ಆಯುಕ್ತ ದೇವರಾಜ್, ಪ್ರವಾಸೋಧ್ಯಮ ಇಲಾಖೆ ಉಪ ನಿರ್ದೇಶಕ ಸಂಜಯ್, ದೇಗುಲ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ತಹಸೀಲ್ದಾರ್ ರಮೇಶ್, ಪುರಸಭಾ ಮುಖ್ಯಾಧಿಕಾರಿ ಸುಜಯ್‌ಕುಮಾರ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net