ಬೇಲೂರು ಚನ್ನಕೇಶವ ದೇಗುಲದ ರಾಜಗೋಪುರಕ್ಕೆ ಸಿಡಿಲು ಬಡಿತ

ಬೇಲೂರು ಚನ್ನಕೇಶವ ದೇಗುಲದ ರಾಜಗೋಪುರಕ್ಕೆ ಸಿಡಿಲು ಬಡಿತ
Published on

ಬೇಲೂರು : ಜಗತ್ತಿನ ಕಲಾರಸಿಕರನ್ನು ತನ್ನೆಡೆಗೆ ಸೆಳೆಯುವ ಐತಿಹಾಸಿಕ ಪ್ರಸಿದ್ಧ ಬೇಲೂರು ಚನ್ನಕೇಶವಸ್ವಾಮಿ ದೇಗುಲದ ರಾಜಗೋಪುರದ ತುದಿಗೆ ಗುರುವಾರ ಮಧ್ಯಾಹ್ನ ಸಿಡಿಲು ಬಡಿದು ಸ್ವಲ್ಪ ಪ್ರಮಾಣದ ಹಾನಿಯಾಗಿದೆ.

ಗುರುವಾರ ಮಧ್ಯಾಹ್ನ ಬೇಲೂರು ಸೇರಿದಂತೆ ಸುತ್ತಮುತ್ತ ಸಿಡಿಲುಸಹಿತ ಧಾರಾಕಾರ ಮಳೆ ಸುರಿಯಿತು. ಮಳೆಗಿಂತ ಸಿಡಿಲಿನ ಅಬ್ಬರ ಜೋರಾಗಿತ್ತು. ಈ ವೇಳೆ ಚನ್ನಕೇಶವಸ್ವಾಮಿ ದೇಗುಲದ ರಾಜಗೋಪುರ ಕಳಸದ ಬಲ ಪಾರ್ಶ್ವಕ್ಕೆ ಸಿಡಿಲು ಬಡಿದು ಸಿಮೆಂಟ್ ಚೂರುಗಳು ಬಿದ್ದಿದ್ದು ಹೆಚ್ಚಿನ ಹಾನಿ ತಪ್ಪಿದೆ ಎನ್ನಲಾಗಿದೆ.

ಸುಮಾರು 900 ವರ್ಷಗಳ ಗತಿ ಇತಿಹಾಸ ಸಾರುವ ಬೇಲೂರು ದೇಗುಲದ ರಾಜಗೋಪುರವನ್ನು ಹೊಯ್ಸಳರ ಬಳಿಕ ವಿಜಯನಗರದ ಅರಸರು ಕಟ್ಟಿದ್ದಾರೆ. ಈ ರಾಜಗೋಪುರ ವಿವಿಧ ಶಿಲ್ಪಕಲೆಗಳಿಂದ ಮತ್ತು ವೈವಿಧ್ಯತೆ ಹಾಗೂ ಸುಂದರ ಜೋಡಣೆಯಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಶಾಸನಗಳ ಪ್ರಕಾರ ಈಗಾಗಲೇ ದೇಗುಲ ಕಳಸವನ್ನು ನಾಲ್ಕು ಬಾರಿ ಜೀಣೋದ್ಧಾರ ಮಾಡಿದ ಬಗ್ಗೆ ಐತಿಹ್ಯವಿದೆ. ಇಂತಹ ರಾಜಗೋಪುರಕ್ಕೆ ಅಳವಡಿಸಿದ ಸಿಡಿಲು ನಿರೋಧಕ ಸ್ಥಗಿತವಾದ ಕಾರಣದಿಂದಲೇ ಇಂತಹ ಅನಾಹುತಕ್ಕೆ ಕಾರಣವಾಗಿದೆ ಎಂದು ಇಲ್ಲಿನ ಭಕ್ತರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬೇಲೂರು ತಹಸೀಲ್ದಾರ್ ಮಮತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಬಂಧಪಟ್ಟ ಇಲಾಖೆಗೆ ತಿಳಿಸಿದ್ದಾರೆ.

ಈ ಬಗ್ಗೆ ಪುರಾತತ್ವ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ಗೌತಮ್ ಮಾತನಾಡಿ, ಈಗಾಗಲೇ ಗೋಪುರದ ಹಾನಿಯ ಬಗ್ಗೆ ಮಾಹಿತಿ ಬಂದಿದೆ. ಸಿಡಿಲು ನಿರೋಧಕ ಸ್ಥಗಿತವಾದ ಸಂದರ್ಭದಲ್ಲಿ ಇಂತಹ ಅನಾಹುತ ನಡೆಯುತ್ತದೆ. ಆದರೆ ಕಳೆದ ಬಾರಿ ವಿಪರೀತ ಮಳೆ, ಸಿಡಿಲಿಗೆ ಯಾವ ಹಾನಿಯೂ ಆಗಿರಲಿಲ್ಲ. ಆದರೆ ಇಂದು ನಡೆದ ಘಟನೆಯ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net