

ಬೇಲೂರು : ಪಟ್ಟಣದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿರುವ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಪೂರ್ವ ಸಿದ್ದತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಪರಿಶೀಲಿಸಿ ಮಾಹಿತಿ ಪಡೆದರು.
ಧರ್ಮ ಸಮ್ಮೇಳನದ ಕಾರ್ಯಕ್ರಮ ನಡೆಯುವ ಸ್ಥಳ, ರಂಭಾಪುರಿ ಜಗದ್ಗುರುಗಳು ತಂಗುವ ಸ್ಥಳ, ಮೆರವಣಿಗೆ ನಡೆಯುವ ಸ್ಥಳ, ವಾಹನ ನಿಲ್ದಾಣ ಸ್ಥಳ ಹಾಗೂ ಹೆಲಿಪ್ಯಾಡ್ ಸ್ಥಳವನ್ನು ಇಲಾಖೆ ಸಿಬ್ಬಂದಿಯೊಂದಿಗೆ ಪರಿಶೀಲಿಸಿದರು.
ಸ್ಥಳ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ದಸರಾ ಧರ್ಮ ಸಮ್ಮೇಳನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಹಲವಾರು ಸಚಿವರು, ಗಣ್ಯರು ಆಗಮಿಸುವ ಹಿನ್ನೆಲಯಲ್ಲಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಭದ್ರತೆಯ ದೃಷ್ಟಿಯಿಂದ ಏನೆಲ್ಲ ಕ್ರಮ ಕೈಗೊಳ್ಳಬಹುದು, ಹೇಗೆ ವ್ಯವಸ್ಥೆ ಮಾಡಬಹುದು ಮತ್ತು ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಭಾಗವಹಿಸುವುದರಿಂದ ವಾಹನಗಳ ನಿಯಂತ್ರಣದ ವ್ಯವಸ್ಥೆ ರೂಪಿಸುವ ಬಗ್ಗೆ ಪರಿಶೀಲಿಸುತಿದ್ದೇವೆ. ಅಲ್ಲದೆ ಆಯೋಜಕರೊಡನೆ ಚರ್ಚಿಸಿ ಅಂತಿಮ ತಿರ್ಮಾನ ಕೈಗೊಳ್ಳಲಾಗುವುದು. ಧಾರ್ಮಿಕ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೂ ಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದರು.
ಅರಸೀಕರೆ ಡಿವೈಎಸ್‌ಪಿ ಅಶೋಕ್ ಕುಮಾರ್, ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸ್‌ಐ ಶಿವನಗೌಡ ಪಾಟೀಲ್, ದಸರಾ ಧರ್ಮಸಮ್ಮೇಳನ ಸಮಿತಿ ಕೋಶಾಧ್ಯಕ್ಷ ನಟರಾಜ್, ಪ್ರಚಾರ ಸಮಿತಿ ಅಧ್ಯಕ್ಷ ಹಗರೆ ದಿಲೀಪ್, ಸಂಚಾಲಕ ಸಂಜಯ್ ಕೌರಿ, ಕೌಶಿಕ್ ಮೊಗಸವರ, ಆಹ್ವಾನ ಪತ್ರಿಕೆ ವಿತರಣಾ ಸಮಿತಿ ಅಧ್ಯಕ್ಷ ಮಲ್ಲೇಶ್, ಅಲಂಕಾರ ಸಮಿತಿ ಅಧ್ಯಕ್ಷ ಪ್ರದೀಪ್, ಸ್ವಾಗತ ಸಮಿತಿ ಅಧ್ಯಕ್ಷ ಕೌರಿ ರಾಜಶೇಖರ್, ಪೂಜಾ ಸಮಿತಿ ಅಧ್ಯಕ್ಷ ರಘು, ಧರ್ಮರಾಜು, ಮಾಧ್ಯಮ ಸಮಿತಿಯ ಸುನೀಲ್, ಚಂದ್ರಶೇಖರ್ ಪಡುವಳಲು ಇದ್ದರು.