

ಬೇಲೂರು: ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ತಾಲೂಕಿನ ಜನರಿಗೆ ಗುರುವಾರ ಮಧ್ಯಾಹ್ನ ದಿಢೀರೆಂದು ಸುರಿದ ಗುಡುಗು ಸಹಿತ ಭಾರೀ ಮಳೆ ಇಳೆಯನ್ನು ತಂಪಾಗಿಸಿದ್ದಲ್ಲದೆ, ರೈತರ ಮುಖದಲ್ಲಿ ಮಂದಹಾಸ ಮೂಡಿಸಿತು.
ಕಳೆದ ಕೆಲ ತಿಂಗಳಿಂದ ವಾತಾವರಣದಲ್ಲಿನ ವ್ಯವತ್ಯಾಸದಿಂದಾಗಿ ತತ್ತರಿಸಿ ಹೋಗಿದ್ದ ಜನರು ಹಾಗೂ ರೈತರು ಯಾವಾಗ ಮಳೆ ಬರುತ್ತದೆ ಎಂದು ಕಾಯುತಿದ್ದರು. ಜತೆಗೆ ಮಳೆ ಇಲ್ಲದೆ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಅಂರ್ಜಲ ಕುಸಿತದಿಂದಾಗಿ ಕೊಳವೇ ಬಾವಿಗಳಲ್ಲಿ ನೀರು ಬಾರದ ಕಾರಣ ಜನರು ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲೂ ವಿಶೇಷವಾಗಿ ಮಲೆನಾಡು ಭಾಗದಲ್ಲಿನ ಕೆರೆ ಕಟ್ಟೆಗಳಲ್ಲೂ ನೀರಿಲ್ಲದೆ ಜಾನುವಾರುಗಳು, ಸಾರ್ವಜನಿಕರು ಕುಡಿಯುವ ನೀರಿಗೆ ಅಲೆಯುವಂತ್ತಾಗಿದೆ. ರೈತರು ಮಳೆ ಬಾರದ ಕಾರಣ ಆಗಸದತ್ತ ಮುಖ ಮಾಡಿ ಕುಳಿತ್ತಿದ್ದರು.
ಆದರೆ ಗುರುವಾರ ಮಧ್ಯಾಹ್ನ ಗುಡುಗು ಮಿಂಚಿನೊಂದಿಗೆ ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಜನರಲ್ಲಿ ಹರ್ಷ ಮೂಡಿಸಿತಲ್ಲದೆ, ಬಿಸಿಲ ಬೇಗೆಯಲ್ಲಿ ಬಸವಳಿದಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿಸಿತು. ಕಳೆದ ಕೆಲ ತಿಂಗಳಿಂದ ಮಳೆಗಾಗಿ ಬಕಪಕ್ಷಿಯಂತೆ ಕಾಯುತಿದ್ದ ರೈತರ ಹೊಲ ಗದ್ದೆಗಳಲ್ಲಿನ ಬೆಳೆಗಳಿಗೆ ಜೀವಕಳೆ ನೀಡಿತು.