

ಹಾಸನ : ಬೇಲೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಭಿವೃದ್ಧಿಗೆ ರಾಜ್ಯ ಸಹಕಾರ ಮಹಾ ಮಂಡಲದಿಂದ ನಿರ್ದೇಶಕ ಪುಟ್ಟಸ್ವಾಮಿ ಅವರು 2.50 ಲಕ್ಷ ರೂ. ಸಹಾಯಧನ ಕೊಡಿಸುತ್ತಿರುವುದು ಶ್ಲಾಘನೀಯ ಎಂದು ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಹೇಳಿದರು.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ತಾಲೂಕಿನ ಜನರ ಆರೋಗ್ಯ ಸಮಸ್ಯೆಗೆ ಪುಟ್ಟಸ್ವಾಮಿ ಸಹಕಾರ ನೀಡಿದ್ದಾರೆ. ರಾಜ್ಯ ಸಹಕಾರ ಮಹಾ ಮಂಡಲದ ನಿರ್ದೇಶಕರಾದ ಕೆಲವೇ ದಿನಗಳಲ್ಲಿ ಬೇಲೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಮಹಾ ಮಂಡಲದಿಂದ 2.50 ಲಕ್ಷ ರೂ. ಸಹಾಯಧನ ಕೊಡಿಸಿದ್ದಾರೆ. ಆ ಮೂಲಕ ಸಂಘದ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದರು.
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಪುಟ್ಟಸ್ವಾಮಿ ಮಾತನಾಡಿ, ಇಲ್ಲಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ಕೋಟ್ಯಂತರ ರೂ. ಆಸ್ತಿ ಹೊಂದಿದ್ದರೂ ವಹಿವಾಟಿಲ್ಲದೆ ಆರ್ಥಿಕವಾಗಿ ಹಿಂದೆ ಬಿದ್ದಿತ್ತು. ನಿರ್ದೇಶಕರ ಸಹಕಾರ, ಹೊಂದಾಣಿಕೆಯಿಂದ ಸಂಘ ಈಗ ಆರ್ಥಿಕವಾಗಿ ಚೇತರಿಕೆ ಕಾಣುತ್ತಿದೆ. ಕಳೆದ ಎರಡು ವರ್ಷದಿಂದ ಸತತವಾಗಿ ಮೈಸೂರು ವಿಭಾಗದಲ್ಲಿ ಅತಿ ಹೆಚ್ಚು ಗೊಬ್ಬರ ಮಾರಾಟ ಮಾಡಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಡಿ.ಇ.ಮಲ್ಲೇಗೌಡ ಮಾತನಾಡಿ, ನಮ್ಮ ಸಂಘಕ್ಕೆ ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಮಹಾಮಂಡಲದ ನಿರ್ದೇಶಕ ಪುಟ್ಟಸ್ವಾಮಿ ಅವರು ಸಹಾಯಧನದ ಚೆಕ್ ವಿತರಿಸುತ್ತಿರುವುದು ಸಂತೋಷ ತಂದಿದ್ದು, ಮುಂದಿನ ದಿನಗಳಲ್ಲೂ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದರು. ಉಪಾಧ್ಯಕ್ಷ ರಾಜಶೇಕರಯ್ಯ, ನಿರ್ದೇಶಕರಾದ ಎಸ್.ನಾಗೇಶ್, ರವಿಕುಮಾರ್, ಲಕ್ಷ್ಮಣ್, ಎಂ.ಕೆ.ಆರ್.ಸೋಮೇಶ್, ಕಣಗುಪ್ಪೆ ಕುಮಾರ್ ಸೇರಿದಂತೆ ಇತರರಿದ್ದರು.