ಬೇಲೂರಲ್ಲಿ ಕಲ್ಯಾಣೋತ್ಸವ ಸಂಪನ್ನ

29blrp4
Published on

ಬೇಲೂರು: ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಏಪ್ರಿಲ್ 9 ರವರೆಗೆ ಪ್ರತಿದಿನ ನಡೆಯಲಿರುವ ದೇವರ ಉತ್ಸವಗಳಂತೆ ಮಂಗಳವಾರ ರಾತ್ರಿ ಶ್ರೀವೈಷ್ಣವ ಪದ್ಧತಿಯಂತೆ ಚನ್ನಕೇಶವಸ್ವಾಮಿಯ ಕಲ್ಯಾಣೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ನೂರಾರು ವರ್ಷಗಳಿಂದ ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವವನ್ನು ಭಕ್ತರ ಸಮ್ಮುಖದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಬ್ರಹ್ಮರಥೋತ್ಸವದ ಅಂಗವಾಗಿ ದೇಗುಲದಲ್ಲಿ ಅಂಕುರಾರ್ಪಣಾ ಕಾರ್ಯಕ್ರಮ ಪ್ರಾರಂಭವಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ದೇವರಿಗೆ ಕಲ್ಯಾಣೋತ್ಸವ ನಡೆದ ನಂತರ ಬ್ರಹ್ಮೋತ್ಸವವು ಪುನಃ ಪ್ರಾರಂಭವಾಗುತ್ತದೆ. ಇದಕ್ಕೆ ಮಂಗಳಕರವಾಗಿ ಕಲ್ಯಾಣೋತ್ಸವವನ್ನು ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಲೋಕಕಲ್ಯಾಣಾರ್ಥವಾಗಿ ಈ ಕೆಲಸವನ್ನು ದೇಗುಲದ ವಾಡಿಕೆಯಂತೆ ಮಾಡಿಕೊಂಡು ಬರಲಾಗುತ್ತಿದೆ.
ಈ ಮಹೋತ್ಸವದ ಅಂಗವಾಗಿ ದೇಗುಲದಲ್ಲಿರುವ ದೇವರ ವಿವಿಧ ವಾಹನಗಳಲ್ಲಿ ಉತ್ಸವ ಮೂರ್ತಿ ಕುಳ್ಳಿರಿಸಿ ಅಷ್ಠಬೀದಿಗಳಲ್ಲಿ ಮೆರವಣಿಗೆ ನಡೆಸಿ ಪೂಜೆ ಸಲ್ಲಿಸಲಾಗುವುದು. ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪ್ರಥಮವಾಗಿ ಶಾರದಾ ಉತ್ಸವ ನಡೆದ ನಂತರದಲ್ಲಿ ದೇವರ ಕಲ್ಯಾಣೋತ್ಸವವನ್ನು ಆಚರಿಸಲಾಗುತ್ತದೆ. ದೇವರ ಕಲ್ಯಾಣೋತ್ಸವಕ್ಕೂ ಮೊದಲು ಶ್ರೀ ಚನ್ನಕೇಶವಸ್ವಾಮಿ, ರಂಗನಾಯಕಿ, ಸೌಮ್ಯನಾಯಕಿ ಅಮ್ಮನವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆದೊಯ್ದು ದೇಗುಲದ ಅವರಣದಲ್ಲಿ ನಿಶ್ಚಿತಾರ್ಥ ಕಾರ್ಯ ಮುಗಿಸಿ, ಕಲ್ಯಾಣ ಮಂಟಪಕ್ಕೆ ಕರೆತಂದು ವಿವಾಹಪೂರ್ವ ಶಾಸ್ತ್ರಗಳಿಗೆ ಚಾಲನೆ ನೀಡಲಾಯಿತು.

ಸುಮಂಗಲಿಯರು ವಿವಾಹ ಪೂರ್ವ ಸಿದ್ಧತೆಗಳಾದ ಗೋಧಿ ಕಲ್ಲು, ಅರಿಶಿಣ ಕುಟ್ಟುವಿಕೆ ಮುಂತಾದ ಶಾಸ್ತ್ರ ಸಂಪ್ರದಾಯದಂತೆ ನಡೆಸಿದರು. ಸಂಜೆ ರಂಗನಾಯಕಿ ಮತ್ತು ಸೌಮ್ಯನಾಯಕಿ ಅಮ್ಮನವರನ್ನು ಮತ್ತು ಚನ್ನಕೇಶವನ ಪ್ರತ್ಯೇಕ ಉತ್ಸವ ನಡೆಸಿ ಆನೆ ಬಾಗಿಲಿನಲ್ಲಿ ತೆರಳಿ ದೇವರಿಗೆ ಸಂಬಂಧ ಮಾಲೆ ಧರಿಸಿ, ಕಲ್ಯಾಣ ಮಂಟಪದಲ್ಲಿ ದೇವರ ಮೂರ್ತಿಗಳನ್ನು ವಧು-ವರರಂತೆ ಸಿಂಗರಿಸಿ ವಿವಾಹ ಶಾಸ್ತ್ರಗಳನ್ನು ಪ್ರಧಾನ ಅರ್ಚಕರಾದ ಶ್ರೀನಿವಾಸ ಭಟ್ಟರ ನೇತೃತ್ವದಲ್ಲಿ ಇತರ ಅರ್ಚಕರು ವೇದಮಂತ್ರ ಘೋಷಗಳೊಂದಿಗೆ ಮಾಂಗಲ್ಯ ಧಾರಣೆ ನಡೆಸುವ ಮೂಲಕ ಕಲ್ಯಾಣೋತ್ಸವ ನೆರವೇರಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ದೇಗುಲದ ಇಒ ವಿದ್ಯುಲತಾ, ಸದಸ್ಯರಾದ ರವಿಶಂಕರ್, ರವೀಂದ್ರ, ಪ್ರಮೋದ್, ಅರ್ಚಕ ನರಸಿಂಹ ಭಟ್ಟರ್, ಅಡ್ಡೆಗಾರರು ಹಾಗೂ ನೂರಾರು ಭಕ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net