ಬೇರೆ ಪಕ್ಷದ ಜತೆ ಹೊಂದಾಣಿಕೆ ಆರೋಪ ಸುಳ್ಳು: ವೆಂಕಟೇಗೌಡ

ಬೇರೆ ಪಕ್ಷದ ಜತೆ ಹೊಂದಾಣಿಕೆ ಆರೋಪ ಸುಳ್ಳು: ವೆಂಕಟೇಗೌಡ
Published on

ಹಾಸನ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಅವರು ಬೇರೆ ಪಕ್ಷದ ಜತೆ ಕೈ ಜೋಡಿಸಿದ್ದೆ ಅವರ ಸೋಲಿಗೆ ಕಾರಣ ಎಂದು ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ದಿನೇಶ್ ಅವರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೆಂಕಟೇಗೌಡ ಹೇಳಿದರು.

ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಅವರು ಇತರ ಪಕ್ಷಗಳ ಜತೆ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಸೋಲುವಂತಾಯಿತು ಎಂದು ಕೆಲ ದಿನಗಳ ಹಿಂದೆ ದಿನೇಶ್ ಆರೋಪಿಸಿದ್ದರು. ಅವರ ಆರೋಪಕ್ಕೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ನಮ್ಮ ಪಕ್ಷದ ಮುಖಂಡರೇ ಸರಿಯಾಗಿ ಕೆಲಸ ಮಾಡದ ಕಾರಣ ಈ ಬಾರಿ ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿದೆ. ಅದಕ್ಕೆ ರಂಗಸ್ವಾಮಿ ಅವರನ್ನು ಹೊಣೆ ಮಾಡುವುದು ಸರಿ ಅಲ್ಲ. ಯಾರೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ. ಕೋವಿಡ್ ಸಂದರ್ಭದಲ್ಲಿ ರಂಗಸ್ವಾಮಿ ಅವರು ಅನೇಕ ಜನಪರ ಕೆಲಸ ಮಾಡಿ ಮಾದರಿಯಾಗಿದ್ದಾರೆ. ಹಾಸನದಲ್ಲಿ ಶಕ್ತಿ ಕಳೆದುಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಮರು ಶಕ್ತಿ ತುಂಬಿದ್ದು ಬನವಾಸೆ ರಂಗಸ್ವಾಮಿ. ಜನರ ಆದೇಶ ಏನೇ ಇದ್ದರೂ ಮುಂದಿನ ದಿನಗಳಲ್ಲಿ ಜನರು ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಲೋಕೇಶ್ ಕುಮಾರ್, ಜಗದೀಶ್, ಮನು, ಉಮನ್, ಆನಂದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net