ಬೇರು ಮಟ್ಟದಿಂದ ಕಾಂಗ್ರೆಸ್ ಸಂಘಟಿಸಲು ಮುಂದಾಗಿ

24Jaggu6
ಬೆಳಗಾವಿ ಖಾಸಬಾಗದ ಸಾಯಿ ಸಭಾಭವನದಲ್ಲಿ ಭಾನುವಾರ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನವಸಂಕಲ್ಪ ಚಿಂತನಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ವಿನಯ ನಾವಲಗಟ್ಟಿ, ಲಕ್ಷ್ಮಣ ರಾವ್ ಚಿಂಗಳೆ, ಪ್ರದೀಪ ಎಂ.ಜೆ., ರಮೇಶ ಕುಡಚಿ, ಸರಳಾ ಸಾತಪುತೆ ಇತರರಿದ್ದರು.
Published on

ಬೆಳಗಾವಿ: ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯಗಳ ಬಗ್ಗೆ ಚರ್ಚಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲಾಗುತ್ತಿದೆ. ಚುನಾವಣೆ ಮೊದಲೇ ಪಕ್ಷವನ್ನು ಬೇರುಮಟ್ಟದಲ್ಲಿ ಸಂಘಟಿಸುವ ಕಾರ್ಯವಾಗಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ನಗರದ ಖಾಸಬಾಗದ ಸಾಯಿ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನವಸಂಕಲ್ಪ ಚಿಂತನಾ ಶಿಬಿರದಲ್ಲಿ ಮಾತನಾಡಿ, ಮೇಲಿಂದ ಮೇಲೆ ಸಭೆ, ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷದ ಸಂಘಟನೆ ಮಾಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಎಲ್ಲರೂ ಶ್ರಮಿಸಬೇಕು. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಕ್ತಿ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ವಿಧಾನಸಭೆ ಚುನಾವಣೆಕ್ಕಿಂತ ನಾವು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಉತ್ತಮವಾಗಿ ಮತ ಪಡೆದಿದ್ದೇವೆ. ಬೆಳಗಾವಿ ದಕ್ಷಿಣದಲ್ಲಿ 2 ಸ್ಥಾನ ಗೆದ್ದಿದ್ದೇವೆ. ಉತ್ತರ ಕ್ಷೇತ್ರದಲ್ಲಿಯೂ ಅದೇ ರೀತಿಯಾಗಿದೆ. ನಮ್ಮ ಪ್ರಕಾರ ನಾವು 18-20 ಸ್ಥಾನಗಳನ್ನು ಗೆಲ್ಲಬೇಕಿತ್ತು. ಆದರೆ, ಹೊಂದಾಣಿಕೆ ಕೊರತೆಯಿಂದಾಗಿ ನಾವು ಸೋತಿದ್ದೇವೆ. ಸೋಲು ಒಂದು ಪಾಠವಾಗಿದೆ. ಲೋಕಸಭೆ ಉಪಚುನಾವಣೆ, ಪಾಲಿಕೆ ಚುನಾವಣೆ ಎದುರಿಸಿರುವುದರಿಂದ ನಮಗೆ ಈಗ ಒಂದು ಅಂದಾಜು ಗೊತ್ತಾಗಿದೆ ಎಂದರು.

ಪದೇ ಪದೆ ಇಂತಹ ಸಭೆ, ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷದ ಕಾರ್ಯಕರ್ತರ ಸಮಸ್ಯೆಗಳು, ಬಡವರು, ನೇಕಾರರು, ಜಿಎಸ್‌ಟಿ ಸಮಸ್ಯೆ ಕುರಿತು ಚರ್ಚಿಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಾಲು, ಮೊಸರು ಸೇರಿ ಯಾವುದನ್ನೂ ಬಿಡದೇ ಎಲ್ಲ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಲು ಸಮಾವೇಶ ಮಾಡಲಾಗುತ್ತಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಬಡವರಿಗೆ ಹೊರೆ ಮಾಡಿದ್ದಾರೆ ಎಂದು ದೂರಿದರು. ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ.ಜೆ., ಮಾಜಿ ಶಾಸಕ ರಮೇಶ ಕುಡಚಿ, ಸರಳಾ ಸಾತಪುತೆ,
ಸುನೀಲ ಹಣಮಣ್ಣವರ, ರವೀಂದ್ರ ನಾಯ್ಕರ, ಬಿ.ಎಸ್.ನಾಡಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net