

ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದ ಐತಿಹಾಸಿಕ ದನಗಳ ಜಾತ್ರಾ ಮಹೋತ್ಸವಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ಶನಿವಾರ ಚಾಲನೆ ನೀಡಿದರು.
ಬೇಬಿ ಬೆಟ್ಟದಲ್ಲಿರುವ ಮಲೆ ಮಹದೇಶ್ವರಸ್ವಾಮಿ ಹಾಗೂ ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ವಿವಿಧ ಜಾನಪದ ಕಲಾತಂಡ ಹಾಗೂ ಮಂಗಳವಾದ್ಯಗಳೊಂದಿಗೆ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮತ್ತು ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಎಂಟು ದಿನಗಳ ಕಾಲ ನಡೆಯುವ ಐತಿಹಾಸಿಕ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಇಡೀ ರಾಜ್ಯದಲ್ಲಿ ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಪರಿಣಾಮ ದನಗಳ ಜಾತ್ರೆ ನಡೆಸಲು ಸರ್ಕಾರ ಅವಕಾಶ ನಿರಾಕರಿಸಿತ್ತು. ಆದರೆ, ಬೇಬಿ ಬೆಟ್ಟದ ಜಾತ್ರೆಯ ಐತಿಹಾಸಿಕ ವಿಚಾರವನ್ನು ಮುಖ್ಯಮಂತ್ರಿಗೆ ಮನದಟ್ಟು ಮಾಡಿಕೊಟ್ಟು ಜಾತ್ರೆಗೆ ಅನುಮತಿ ಪಡೆಯಲಾಗಿದೆ. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸಿ ಗಸ್ತು ತಿರುಗುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, ಕೋವಿಡ್‌ನಂತಹ ಕಷ್ಟ ಕಾಲದಲ್ಲೂ ಇಲ್ಲಿನ ದನಗಳ ಜಾತ್ರೆ ಸ್ಥಗಿತವಾಗಿರಲಿಲ್ಲ. ಈ ಬಾರಿ ದನಗಳ ಜಾತ್ರೆಗೆ ಅವಕಾಶ ಸಿಗುತ್ತದೋ, ಇಲ್ಲವೋ ಎಂಬ ಆತಂಕ ಕಾಡುತ್ತಿತ್ತು. ಜಾತ್ರೆಗೆ ಸರ್ಕಾರ ಅನುಮತಿ ನೀಡಿದ್ದು, ಇದಕ್ಕಾಗಿ ಶಾಸಕ ಸಿ.ಎಸ್.ಪುಟ್ಟರಾಜು ಸಾಕಷ್ಟು ಶ್ರಮವಹಿಸಿದ್ದಾರೆ. ನಾವು ಮಠದ ಪೀಠಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದಾಗ ಯಾವುದೇ ಸೌಲಭ್ಯವಿಲ್ಲದೆ ಮಳೆಗಾಲದಲ್ಲಿ ಮಠದ ಛಾವಣಿ ಸೋರುತ್ತಿತ್ತು. ಈ ವಿಚಾರವನ್ನು ಶಾಸಕರ ಗಮನಕ್ಕೆ ತಂದ ತಕ್ಷಣ ಸ್ಪಂದಿಸಿ ದುರಸ್ತಿ ಮಾಡಿಸಿದ್ದಾರೆ. ಜತೆಗೆ ಏತ ನೀರಾವರಿ ಮೂಲಕ ಇಡೀ ಕ್ಷೇತ್ರದಲ್ಲಿ ನೀರಿಗೆ ಹಾಹಾಕಾರವಿಲ್ಲದಂತೆ ಕ್ರಮ ಕೈಗೊಂಡಿದ್ದಾರೆ ಎಂದು ಶ್ಲಾಘಿಸಿದರು.
ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಇಡೀ ರಾಜ್ಯದಲ್ಲಿ ಹಲವು ಕಡೆ ದನಗಳ ಜಾತ್ರೆ ಆಯೋಜಿಸುವುದು ಸಾಮಾನ್ಯವಾಗಿದೆ. ಆದರೆ ಈ ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ ಚಿನ್ನದ ಬಹುಮಾನ ನೀಡುವುದು ವಿಶೇಷ. ಶಾಸಕ ಸಿ.ಎಸ್.ಪುಟ್ಟರಾಜು ಅವರು ಜಾತ್ರೆಯನ್ನು ಅಚ್ಚುಕಟ್ಟಾಗಿ ಯಾವುದೇ ಲೋಪವಿಲ್ಲದಂತೆ ನಿಭಾಯಿಸುವಲ್ಲಿ ನಿಪುಣರಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್ ಮಾತನಾಡಿ, ಸಿ.ಎಸ್.ಪುಟ್ಟರಾಜು ಅವರು ಮೊದಲ ಬಾರಿ ಶಾಸಕರಾದಾಗ ಪ್ರಥಮವಾಗಿ ಆಯೋಜಿಸಿದ್ದ 155 ಜೋಡಿ ಸಾಮೂಹಿಕ ಸರಳ ವಿವಾಹದಲ್ಲಿ ಶಾಸಕರ ಮಗಳು ಸೇರಿದಂತೆ ನಮ್ಮ ಕುಟುಂಬದ 12 ಜನರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೆವು ಎಂದು ಸ್ಮರಿಸಿದರು.
ಉಪವಿಭಾಗಾಧಿಕಾರಿ ನಂದೀಶ್, ತಹಸೀಲ್ದಾರ್ ಕೆ.ಸಿ.ಸೌಮ್ಯಾ, ತಾಪಂ ಇಒ ಎಸ್.ಎಂ.ಲೋಕೇಶ್ ಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚೆಲುವರಾಜು, ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಹೊನಹಾನಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ, ಚಿನಕುರಳಿ ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಜಾತ್ರಾ ಸಮಿತಿ ಅಧ್ಯಕ್ಷ ಶಿಂಡಬೋಗನಹಳ್ಳಿ ನಾಗಣ್ಣ, ಸಿ.ಎ.ಲೋಕೇಶ್, ಮೈಕ್ ಮಹದೇವು ಇತರರು ಇದ್ದರು.