

ಚಿತ್ರದುರ್ಗ: ತರಾಸು ರಂಗಮಂದಿರದಲ್ಲಿ ಜೂ. 9ರಂದು ಸಂಜೆ 5.30ಕ್ಕೆ ಲಾಸಿಕಾ ಫೌಂಡೇಶನ್‌ನಿಂದ ಬೇಬಿ ಬಿ.ಪ್ರಿಯಾಂಕಾ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇಲ್ಲಿನ ವಿದ್ಯಾನಗರದ ಈರುಳ್ಳಿ ಮಲ್ಲಪ್ಪ ಬಡಾವಣೆ ವಾಸಿಗಳಾದ ಎಸ್.ಆರ್.ಪುಷ್ಪಾ-ಎಂ.ಬಾಬು ಅವರ ಪುತ್ರಿ ಪ್ರಿಯಾಂಕಾ ವಿದುಷಿ ಶ್ವೇತಾ ಮಂಜುನಾಥ್ ಶಿಷ್ಯೆಯಾಗಿದ್ದು, 4ನೇ ವಯಸ್ಸಿನಿಂದಲೇ ಇವರ ಬಳಿಯಲ್ಲಿ ಶಾಸ್ತ್ರೀಯ ಭರತನಾಟ್ಯ ನೃತ್ಯಾಭ್ಯಾಸದಲ್ಲಿ ತೊಡಗಿದ್ದು, ಈಗ ರಂಗಪ್ರವೇಶದ ಮೂಲಕ ಗುರುವಂದನೆ, ಕಲಾರಾಧನೆಗೆ ಅಣಿಯಾಗುತ್ತಿದ್ದಾಳೆ.
ಫೌಂಡೇಶನ್‌ನ ಕಲಾ ತಂಡದೊಂದಿಗೆ ಬನವಾಸಿ ಕದಂಬೋತ್ಸವ, ವಿಜಯನಗರದ ಹಂಪಿ ಉತ್ಸವ, ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ, ಕಬೀರಾನಂದಾಶ್ರಮದ ಮಹಾಶಿವರಾತ್ರಿ ಮಹೋತ್ಸವ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಕಲಾರಸಿಕರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.
ನಗರದ ಚಂಪಕಾ ಶ್ರೀಧರ್ ಅವರ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದಾಳೆ. ವಿದ್ಯಾಭ್ಯಾಸದ ಜತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ, ಎರಡು ಸ್ವರ್ಣ, ನಾಲ್ಕು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾಳೆ. ಕ್ರೀಡೆಯಲ್ಲೂ ಮುಂಚೂಣಿಯಲ್ಲಿದ್ದು, ಹಲವು ಪ್ರಶಸ್ತಿ ಪಡೆದುಕೊಂಡಿರುವ ಹೆಗ್ಗಳಿಕೆ ಪ್ರಿಯಾಂಕಾದ್ದಾಗಿದೆ.
ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಜ್ಯೂನಿಯರ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ.
ರಂಗಪ್ರವೇಶಕ್ಕೆ ಮುಖ್ಯ ಅತಿಥಿಗಳಾಗಿ ಎಡಿಸಿ ಬಿ.ಟಿ.ಕುಮಾರಸ್ವಾಮಿ, ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ, ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ವರದಿಗಾರ ಕೆ.ಕಾಂತರಾಜ ಅರಸು ಭಾಗವಹಿಸುವರು. ಇದೇ ವೇಳೆ ವಿದುಷಿ ಶ್ವೇತಾ ಮಂಜುನಾಥ್ ಅವರಿಗೆ ಗುರುವಂದನೆ ಆಯೋಜಿಸಲಾಗಿದೆ.