

ಬಾಗಲಕೋಟೆ: ರಾಜ್ಯದಲ್ಲಿ ಕೆಲವರು ಬೇನಾಮಿ ಹೆಸರಿನಲ್ಲಿ ಒಬ್ಬೊಬ್ಬರು ೪೦ ರಿಂದ ೬೦ ಬಾರ್ ಗಳ ಲೈಸನ್ಸ್ ಪಡೆದುಕೊಂಡಿದ್ದಾರೆ. ಇದು ಒಬ್ಬರಿಗೆ ಆಗಬಾರದು. ಈ ಹಿನ್ನಲೆಯಲ್ಲಿ ಮಧ್ಯಮ ವರ್ಗದವರು ಆಸಕ್ತಿ ವಹಿಸಿ ಮುಂದೆ ಬಂದರೆ ಯಾವುದೇ ಜಾತಿ ಬೇಧ ಇಲ್ಲದೇ ಅವರಿಗೆ ಇಲಾಖೆಯಿಂದ ಸಿಎಲ್ ೭ ಪರವಾಣಿಗೆ ಕೊಡಲು ಅಬಕಾರಿ ಇಲಾಖೆಯಿಂದ ಎಲ್ಲ ಸಹಕಾರ ನೀಡುವುದಾಗಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ನಗರದಲ್ಲಿ ಉದ್ಯಮಿ ಫೀರಪ್ಪ ಮ್ಯಾಗೇರಿ ಅವರು ಹೊಸದಾಗಿ ಆರಂಭಿಸಿದ ಭಾರತ ಪೆಟ್ರೋಲಿಯಮ್ ಪೆಟ್ರೋಲ್ ಬಂಕ್‌ನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಸಾಧನೆಗೆ ಹಲವು ಮಾರ್ಗಗಳು ಇವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು. ನಮ್ಮಲ್ಲಿ ಅಭಿವೃದ್ಧಿಯ ಗುರಿ ಇರಬೇಕು, ಅದಕ್ಕೆ ಸೌಜನ್ಯವೂ ಹೊಂದಬೇಕು. ಜನಪ್ರತಿನಿಽಗಳಿಂದ ಹೇಗೆ ಕೆಲಸ ತೆಗೆದುಕೊಳ್ಳಬೇಕು ಎನ್ನುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಈ ಕಲೆಯನ್ನು ಉದ್ಯಮಿ ಫೀರಪ್ಪ ಮ್ಯಾಗೇರಿ ಚನ್ನಾಗಿ ಕಲಿತಿದ್ದಾರೆ. ಇದರಿಂದ ಕಷ್ಟ ಜೀವನ ದಾಟಿಕೊಂಡು ಇವತ್ತು ಉದ್ಯಮಿ ಆಗಿದ್ದಾರೆ. ಹೋಟೆಲ್, ರೆಸ್ಟೋರೆಂಟ್, ಬಾರ್ ಗಳನ್ನು ಹೊಂದಿದ್ದು, ಈಗ ಪೆಟ್ರೋಲ್ ಬಂಕ್ ಸಹ ಮಾಡಿಕೊಂಡು, ಯಶಸ್ವಿ ಉದ್ಯಮಿ ಆಗುವತ್ತ ಸಾಗಿದ್ದಾರೆ ಎಂದು ಬಣ್ಣಿಸಿದರು.
ಬಾರ ಆ್ಯಂಡ್ ರೆಸ್ಟೋರೆಂಟ್ ಹಾಗೂ ಪೆಟ್ರೋಲ್ ಬಂಕ್ ಅಕ್ಕಪಕ್ಕ ಮಾಡಿರುವ ಬಗ್ಗೆ ಅಬಕಾರಿ ಸಚಿವ ಸ್ವಾರಸ್ಯವಾಗಿ ನಗಿಸುತ್ತಲೇ ಎಚ್ಚರಿಕೆಯನ್ನು ಸಹ ನೀಡಿದರು. ಇಲ್ಲಿ ನಮ್ಮ ಎಣ್ಣೆ(ಅಬಕಾರಿ ಇಲಾಖೆ) ಇದೆ, ಪಕ್ಕದಲ್ಲಿ ಗಾಡಿಗೆ ಹಾಕುವ ಎಣ್ಣೆಯೂ ಇದೆ. ನಮ್ಮ ಎಣ್ಣೆ(ಮದ್ಯ) ಹಾಕಿದರೆ ಕಿಕ್ ಕೊಡುತ್ತದೆ. ಈ ಎಣ್ಣೆ(ಪೆಟ್ರೋಲ್) ಹಾಕಿದರೆ ಗಾಡಿ ಓಡುತ್ತದೆ. ಇವು ಎರಡು ವಿರುದ್ಧವಾಗಿವೆ. ನಮ್ಮ ಎಣ್ಣೆ ಹಾಕಿಕೊಂಡು ಬಂದು ಈ ಎಣ್ಣೆ ಹಾಕಿಸಿಕೊಂಡು ಹೋಗಬೇಡಿ. ಯಾವುದೇ ಕಾರಣಕ್ಕೂ ನಮ್ಮ ಎಣ್ಣೆ ಹಾಕಿಕೊಂಡು ಈ ಕಡೆಗೆ ಬರಬೇಡಿ. ಅದು ಅಪಾಯ ಉಂಟು ಮಾಡುತ್ತದೆ ಎಂದು ಚಟಾಕಿ ಹಾರಿಸುತ್ತಲೇ ಮದ್ಯಪಾನ ಮಾಡಿಕೊಂಡು ವಾಹನ ಚಲಾಯಿಸಬೇಡಿ ಎಂದು ಮನವಿ ಮಾಡಿದರು.
ಉದ್ಯಮಿ ಫೀರಪ್ಪ ಮ್ಯಾಗೇರಿ ಮಾತನಾಡಿ, ಆರಂಭದಲ್ಲಿ ಎದುರಿಸಿ ಕಷ್ಟದ ದಿನಗಳು, ಸಾಲ ಸಿಗದೇ ಓಡಾಟವನ್ನು ಮೆಲಕು ಹಾಕಿದರು. ಇವತ್ತು ತಾವು ಆರ್ಥಿಕವಾಗಿ ಬೆಳೆಯಲು ಕಾರಣವಾಗಿದ್ದರೆ ಅದಕ್ಕೆ ಸಂಪೂರ್ಣ ಕಾರಣರಾದವರು ಮಾಜಿ ಸಚಿವ ಎಸ್.ಆರ್.ಪಾಟೀಲ ಅವರು. ತನು, ಮನ, ಧನದಿಂದ ನನ್ನ ಕೈಹಿಡಿದಿದ್ದಾರೆ. ಆ ಬಳಿಕ ಸಚಿವ ಆರ್.ಬಿ.ತಿಮ್ಮಾಪುರ ಅವರು. ಅವರಿಗೆ ಶೋಷಿತರ ಬಗ್ಗೆ ಇರುವ ಕಾಳಜಿ ಅಪಾರ. ಎರಡು ಸಲ ಸಚಿವರಾದಾಗಲೂ ನನಗೆ ಎರಡು ಲೈಸನ್ಸ್ ಮಾಡಿಕೊಟ್ಟಿದ್ದಾರೆ. ಇದರಿಂದ ಇವತ್ತು ವಿವಿಧ ಸಂಸ್ಥೆಗಳನ್ನು ಆರಂಭಿಸಲು ಇವರಿಬ್ಬರ ಸಹಾಯ ಅಪಾರ ಎಂದು ಸ್ಮರಿಸಿದರು.
ವೇದಿಕೆಯಲ್ಲಿ ಜಮಖಂಡಿಯ ಹುಲ್ಯಾಳದ ಗುರುದೇವಾಶ್ರಮದ ಶ್ರೀ ಹರ್ಷಾನಂದ ಸ್ವಾಮೀಜಿ, ಮಾಜಿ ಸಚಿವ ಎಸ್.ಆರ್.ಪಾಟೀಲ, ಜಿಲ್ಲಾಽಕಾರಿ ಜಾನಕಿ ಕೆ.ಎಂ, ಎಸ್ಪಿ ಅಮರನಾಥ ರೆಡ್ಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಸೋಮಶೇಖರ ಹೊಸಮನಿ, ಮಹಾಂತೇಶ್ ಬೇವೂರ, ಆರ್.ಆರ್.ತುಂಬರಮಟ್ಟಿ, ಸುರೇಶ್ ಹಲಾಟೆ, ನಿಖಿಲ ಸಾಳೊಂಕೆ, ನಿಂಗನಗೌಡ ಪಾಟೀಲ ಮತ್ತಿತರರು ಇದ್ದರು.