

ನಾಪೋಕ್ಲು: ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ಯುವಕ ಸಂಘದ ವತಿಯಿಂದ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ವಿವಿಧ ಆಟೋಟಗಳ ಸ್ಪರ್ಧೆಗಳನ್ನು ಮಂಗಳವಾರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಏರ್ಪಡಿಸಲಾಗಿತ್ತು.
ಯುವಕ ಸಂಘದ ಅಧ್ಯಕ್ಷ ಕಾಳೆಯಂಡ ರೀನೇಶ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಸ್ಪರ್ಧೆಗಳು ನಡೆದವು. ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಕೊಂಡಿರ ಗಣೇಶ್ ನಾಣಯ್ಯ, ಕುಟ್ಟಂಜೆಟ್ಟಿರ ಶ್ಯಾಂ ಭೋಪಣ್ಣ ಇನ್ನಿತರರು ಪಾಲ್ಗೊಂಡಿದ್ದರು.
ಶಾಲಾ ಮಕ್ಕಳಿಗೆ ಓಟದ ಸ್ಪರ್ಧೆ, ಕಪ್ಪೆ ಹಾರುವುದು, ಸೂಜಿ ನೂಲು ಓಟದ ಸ್ಪರ್ಧೆಗಳು, ಮಹಿಳೆಯರಿಗೆ ಕಣ್ಣು ಕಟ್ಟಿ ಮಡಕೆ ಒಡೆಯುವುದು, ನಿಂಬೆಹಣ್ಣಿನ ಓಟ, ಅದೃಷ್ಟದ ಆಟ ಸ್ಪರ್ಧೆಗಳು, ಸಾರ್ವಜನಿಕರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಭಾರದ ಕಲ್ಲು ಎಸೆತ, 100 ಮೀಟರ್ ಓಟದ ಸ್ಪರ್ಧೆ ನಡೆದವು. ಗ್ರಾಮದ ಸಾರ್ವಜನಿಕರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಹಾಗೂ ಸಾಮೂಹಿಕವಾಗಿ ವಾಲಗ ತಾಟ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮಕ್ಕಳಾದಿಯಾಗಿ ಎಲ್ಲರೂ ಆಟೋಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.