ಬೇಡ್ತಿ ಹೊಸ ಸೇತುವೆ ಸಂಚಾರಕ್ಕೆಶೀಘ್ರ ಮುಕ್ತ

20 YLP 03
Published on

ಯಲ್ಲಾಪುರ: ಯಲ್ಲಾಪುರ ಹಾಗೂ ಶಿರಸಿ ತಾಲೂಕಿಗೆ ಸಂಪರ್ಕ ಕೊಂಡಿಯಾಗಿರುವ ತಾಲೂಕಿನ ಬೇಡ್ತಿಯ ನೂತನ ಸೇತುವೆ ಕಾಮಗಾರಿ ಅಂತೂ ಮುಗಿಯುವ ಹಂತಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.

18 ತಿಂಗಳಿನಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಕಾಮಗಾರಿ ಆರಂಭವಾಗಿ 3-4 ವರ್ಷಗಳೇ ಕಳೆದರೂ ವಿವಿಧ ಕಾರಣಗಳಿಂದಾಗಿ ಮುಗಿದಿರಲಿಲ್ಲ. ಕಳೆದ ವರ್ಷದ ಅತಿವೃಷ್ಟಿಯ ಸಂದರ್ಭದಲ್ಲಿ ಹೊಸ ಸೇತುವೆಯ ರೇಲಿಂಗ್ ಕೊಚ್ಚಿಕೊಂಡು ಹೋಗಿತ್ತು. ಇದರಿಂದ ಕಾಮಗಾರಿಗೆ ಅಲ್ಪಮಟ್ಟಿನ ಹಿನ್ನಡೆ ಉಂಟಾಗಿತ್ತು. ಇಷ್ಟಾಗಿಯೂ ನಂತರ ಭರದಿಂದ ಕಾಮಗಾರಿ ಸಾಗಿದ್ದು, ಇದೀಗ ಅಂತಿಮ ಹಂತ ತಲುಪಿದೆ.

ಅಂದಾಜು 174 ಮೀಟರ್ ಉದ್ದದ ಸೇತುವೆಯನ್ನು 23.67 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಿುಸಲಾಗುತ್ತಿದೆ. ಈಗ ಶಿರಸಿ ಕಡೆ ಕೂಡುರಸ್ತೆಯ ಕೆಲಸ ಅಂತಿಮ ಹಂತದಲ್ಲಿದ್ದು, ಅದು ಮುಗಿದರೆ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ.

ಬೇಡ್ತಿ ನದಿಗೆ ಅಡ್ಡಲಾಗಿ ನಿರ್ವಿುಸಿರುವ ಶತಮಾನಗಳಷ್ಟು ಹಳೆಯ ಸೇತುವೆ ಶಿಥಿಲಗೊಂಡಿದೆ. ಅದು ಕುಸಿದರೆ ಎರಡು ತಾಲೂಕುಗಳ ನಡುವಿನ ಸಂಪರ್ಕ ಕಡಿದು ಹೋಗಬಹುದೆಂಬ ಆತಂಕ ಕಳೆದ ಕೆಲ ವರ್ಷಗಳಿಂದಲೂ ಇತ್ತು. ಕೆಲವೇ ದಿನಗಳಲ್ಲಿ ಹೊಸ ಸೇತುವೆ ಬಳಕೆಗೆ ತೆರೆದುಕೊಳ್ಳುವುದರೊಂದಿಗೆ ಆ ಆತಂಕ ದೂರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net