

ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿ ಬೇಡಿಗನಹಳ್ಳಿ ಗ್ರಾಮದ ಕೆರೆ ಏರಿಯ ಮೇಲೆ ಗುರುವಾರ ರಾತ್ರಿ ಯುವಕನೊಬ್ಬನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ತಾಲೂಕಿನ ಹೊಸೂರು ಗ್ರಾಮದ ಹೇಮಂತ್ ಎಂಬವರ ಹಿರಿಯ ಮಗ ಪುನೀತ್ (25) ಮೃತ ಯುವಕ.
ಘಟನೆಯ ವಿವರ: ಹೊಸೂರು ಗ್ರಾಮದ ಹೇಮಂತ್ ಹಾಗೂ ಪತ್ನಿ ಯಶೋಧ ಪ್ರತ್ಯೇಕವಾಗಿ ವಾಸವಾಗಿದ್ದಾರೆ.
ಹೊಸೂರು ಗ್ರಾಮದಲ್ಲಿ ತಂದೆ ಹೇಮಂತ್ ಜತೆ ಎರಡನೇ ಮಗ ಪ್ರಶಾಂತ್ (22) ಇದ್ದರೆ, ತಾಯಿ ಯಶೋಧ ಜತೆ ಬೇಡಿಗನಹಳ್ಳಿ ಗ್ರಾಮದಲ್ಲಿ ಪುನೀತ್ ವಾಸವಾಗಿದ್ದನು.
ಗುರುವಾರ ರಾತ್ರಿ 7.30 ರಿಂದ 8 ಗಂಟೆ ಸುಮಾರಿನಲ್ಲಿ ಹೊಸೂರು ಗ್ರಾಮದ ದೊಡ್ಡಪ್ಪನ ಮನೆಯಲ್ಲಿ ಊಟ ಮುಗಿಸಿಕೊಂಡು ಬೇಡಿಗನಹಳ್ಳಿಗೆ ಕೆರೆ ಏರಿ ಮೇಲೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಪುನೀತನ ಎಡಗೈ ಹಾಗೂ ಎದೆಯ ಭಾಗಕ್ಕೆ ಎರಡು ಗುಂಡು ಬಿದ್ದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಎಸ್ಪಿ ಆರ್.ಶ್ರೀನಿವಾಸ್ ಗೌಡ, ಹೊಳೆನರಸೀಪುರ ಡಿವೈಎಸ್ಪಿ ಲಕ್ಷ್ಮೇಗೌಡ, ಸಿಪಿಐ ಕುಮಾರ್ ಹಾಗೂ ಪಿಎಸ್ಐ ವಿನೋದ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ದುಷ್ಕರ್ಮಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.