ಬೇಡಿಕೆಗಿಂತ ಜಿಲ್ಲೆಗೆ ಈಗ ಅಧಿಕ ಯೂರಿಯಾ ಪೂರೈಕೆ

CTD ZP KDP------
Published on

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಂತ ಕಳಪೆ ಫಲಿತಾಂಶ ಪಡೆದ ಜಿಲ್ಲೆಯ ಅನುದಾನಿತ ಪ್ರೌಢಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚಿಸಿದರು.

ಸೋಮವಾರ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಸರ್ಕಾರದ ಅನುದಾನ, ಸೌಲಭ್ಯಗಳನ್ನು ಬಳಸಿಕೊಂಡರೂ ಈ ಶಾಲೆಗಳಲ್ಲಿ ಫಲಿತಾಂಶ ಕುಸಿದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಕಡಿಮೆ ಫಲಿತಾಂಶ ಪಡೆದ ಶಾಲೆ ಮುಖ್ಯ ಶಿಕ್ಷಕರು, ಬಿಇಒ ಅವರನ್ನು ನೇರ ಹೊಣೆ ಮಾಡಿ ವಿಷಯವಾರು ಶಿಕ್ಷಕರ ವಿರುದ್ಧವೂ ಕ್ರಮ ಜರುಗಿಸುವಂತೆ ಡಿಡಿಪಿಐ ಎಂ.ಆರ್. ಮಂಜುನಾಥ್‌ಗೆ ಅವರಿಗೆ ತಿಳಿಸಿದರು.

ಈ ಬಾರಿಯ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ 10ನೇ ಸ್ಥಾನದೊಳಗೆ ಜಿಲ್ಲೆ ಇರಬೇಕು. ಇದಕ್ಕಾಗಿ ಕ್ರಮ ವಹಿಸಲಾಗಿದೆ ಎಂದು ಜಿಪಂ ಸಿಇಒ ಡಾ.ಎಸ್.ಆಕಾಶ್ ಹೇಳಿದರು.

ಕಳಪೆ ಫಲಿತಾಂಶ ಪಡೆದ 40 ಸರ್ಕಾರಿ ಹಾಗೂ 60 ಅನುದಾನಿತ ಶಾಲೆಗಳು ಸೇರಿ 100 ಶಾಲೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಯುದ್ಧಗಳ ಕಾರಣದಿಂದಾಗಿ ಯೂರಿಯಾ ಪೂರೈಕೆಯಲ್ಲಿ ಸಮಸ್ಯೆ ಆಗಿತ್ತು. ಆದರೆ ಈಗ ಕೊರತೆ ಇಲ್ಲ. ಈವರೆಗೆ 26,760 ಮೆಟ್ರಿಕ್‌ಟನ್ ಯೂರಿಯಾ ಮಾರಾಟವಾಗಿದೆ. ಪ್ರಸ್ತುತ 1533 ಟನ್ ಯೂರಿಯಾ ದಾಸ್ತಾನಿದೆ. ಬೇಡಿಕೆಗಿಂತಲೂ ಹೆಚ್ಚು ಯೂರಿಯಾ ಈಗ ಪೂರೈಕೆ ಆಗುತ್ತಿದೆ ಎಂದು ತಿಳಿಸಿದರು.

ಮುಂಗಾರು ಹಂಗಾಮಿನಲ್ಲಿ 3.16 ಲಕ್ಷ ಹೆ. ಬಿತ್ತನೆ ಗುರಿ ಇದೆ. ಈವರೆಗೆ 2.71ಲಕ್ಷ ಹೆ. ನಲ್ಲಿ ಬಿತ್ತನೆಯಾಗಿದೆ. ಹಿರಿಯೂರು ತಾಲೂಕಲ್ಲಿ 40,510 ಹೆಕ್ಟೇರ್ ಗುರಿ ಪೈಕಿ 6759 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 20,700 ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಜಿಲ್ಲೆಯಲ್ಲಿ 31 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ ಬೆಳೆಯಲಾಗುತ್ತಿದೆ. ಡಿಎಚ್-256, ಸಹ್ಯಾದ್ರಿ ದುರ್ಗ ಎಂಬ 2 ಹೊಸ ಶೇಂಗಾ ತಳಿಗಳನ್ನು ಪರಿಚಯಿಸಲಾಗಿದೆ ಎಂದರು.

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, 2022-23 ನೇ ಸಾಲಿನಲ್ಲಿ ಬೆಳೆ ವಿಮೆ ಪರಿಹಾರ ಯೋಜನೆಯಲ್ಲಿ 48 ಕೋಟಿ ರೂ. ಗೂ ಹೆಚ್ಚಿನ ಅಕ್ರಮ ನಡೆದಿರುವ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು. ಈ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸಲಾಗಿದೆ ಎಂದು ಮಂಜುನಾಥ್ ಪ್ರತಿಕ್ರಿಯಿಸಿದರು.

ಇಇ ವಿರುದ್ಧ ಹರಿಹಾಯ್ದ ಸಚಿವ

ಜಿಲ್ಲೆಯಲ್ಲಿ ರಾಜ್ಯ, ಜಿಲ್ಲಾ ಮುಖ್ಯರಸ್ತೆಗಳ ನಿರ್ವಹಣೆ, ಗುಂಡಿಗಳನ್ನು ಮುಚ್ಚುವ ಕಾಮಗಾರಿ ಕುರಿತಂತೆ ಲೋಕೋಪಯೋಗಿ ಇಲಾಖೆ ಇಇ ನಾಗರಾಜ್ ವಿರುದ್ಧ ಹರಿಹಾಯ್ದ ಸಚಿವರು, ಗುತ್ತಿಗೆದಾರರು ನಿಮ್ಮ ಮಾತು ಕೇಳುತ್ತಿಲ್ಲ. ಹಿರಿಯೂರು ತಾಲೂಕಿನ 16 ಕಾಮಗಾರಿಗಳ ಪೈಕಿ 2 ಆರಂಭವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗರಂ ಆದ ಶಾಸಕರು

ವರ್ಗಾವಣೆ ನೀತಿ ಸಹಿತ ಆರೋಗ್ಯ ಇಲಾಖೆ ಕುರಿತ ಚರ್ಚೆ ವೇಳೆ ಆಡಳಿತ ಪಕ್ಷದ ರಘುಮೂರ್ತಿ ಹಾಗೂ ಬಿಜೆಪಿಯ ಎಂಎಲ್‌ಸಿ ನವೀನ್ ಗರಂ ಆದರು.

ಆಪರೇಷನ್ ಸಕ್ಸಸ್, ಪೇಷಂಟ್‌ಡೆಡ್ ಎಂಬಂತೆ ವರ್ಗಾವಣೆ ಕೌನ್ಸೆಲಿಂಗ್ ನಡೆಸಲಾಗಿದೆ. ವ್ಯವಸ್ಥೆ ಸರಿಪಡಿಸಲು ಹೋಗಿ ಅವ್ಯವಸ್ಥೆ ಆಗಿದೆ ಎಂದು ರಘುಮೂರ್ತಿ ಹೇಳಿದರು. ಇದರಿಂದ ಚಳ್ಳಕೆರೆ,ಪರಶುರಾಂಪುರ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯನ್ನು ಮೇಲಧಿಕಾರಿಗೆ ತಿಳಿಸುವಂತೆ ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್‌ಗೆ ಸೂಚಿಸಿದರು.

ಕೋವಿಡ್ ವೇಳೆ ನಡೆಸಿದ ಖರೀದಿಗೆ ಸಂಬಂಧಿಸಿದಂತೆ ಡಿಎಂಎಫ್ ಹೊರತುಪಡಿಸಿ ಸಿಎಸ್‌ಆರ್ ನಿಧಿಯಡಿ ಖರೀದಿಸಿದಕ್ಕೆ ಲೆಕ್ಕ ಕೊಟ್ಟಿಲ್ಲವೆಂದು ಶಾಸಕ ಡಾ. ಚಂದ್ರಪ್ಪ ಹೇಳಿದರು. ತನಿಖೆಗೆ ಸರ್ಕಾರ ನ್ಯಾ.ಮೈಕಲ್‌ಖುನ್ಹಾ ನಿಯೋಗ ನೇಮಿಸಿದೆ. ಜಿಲ್ಲಾಸ್ಪತ್ರೆ ದಾಖಲೆಗಳನ್ನು ನಿಯೋಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್‌ಆದಿತ್ಯ ಬಿಸ್ವಾಸ್ ಹೇಳಿದರು. ಒಂದೂವರೆ ತಾಸಿಗೂ ಅಧಿಕ ಕಾಲ ಆರೋಗ್ಯ ಇಲಾಖೆ ಕುರಿತ ಚರ್ಚೆಗೆ ನವೀನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ. ಪೋಸ್ಟ್‌ಮಾರ್ಟ್‌ಂ ಸ್ಥಳದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ವ್ಯವಸ್ಥೆ ಸರಿಪಡಿಸಲು ಡಿಎಚ್‌ಒ, ಜಿಲ್ಲಾ ಶಸ್ತ್ರ ಚಿಕಿತ್ಸಕರು ವಿಫಲರಾಗಿದ್ದಾರೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆ ಸಿಬ್ಬಂದಿ ಸಾಮೂಹಿಕ ರಜೆ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ತಿದ್ದುವ ಕೆಲಸವಾಗಿದೆ. ರಜೆ ಅರ್ಜಿಗಳನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗುವುದು. ತಪ್ಪೆಸಗಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಬಿಸ್ವಾಸ್ ಎಚ್ಚರಿಸಿದರು.

ಹೊರಗುತ್ತಿಗೆ ನೌಕರರ ವೇತನದಲ್ಲೂ ಪರ್ಸೆಂಟೇಜ್ ಪಡೆಯಲಾಗುತ್ತಿದೆ ಎಂಬ ಆರೋಪಗಳಿವೆ ಎಂದರು.

ಜಿಲ್ಲಾಸ್ಪತ್ರೆ ವೈದ್ಯಕೀಯ ಕಾಲೇಜಿನೊಂದಿಗೆ ಸೇರ್ಪ ಡೆ ಹಿನ್ನಲೆಯಲ್ಲಿ ಚಳ್ಳಕೆರೆ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ರಘುಮೂರ್ತಿ ಹೇಳಿದರು.

ಕೆಎಸ್‌ಆರ್‌ಟಿಸಿ ನಿಲ್ದಾಣ

ಚಿತ್ರದುರ್ಗದಲ್ಲಿ 80 ಕೋಟಿ ರೂ.ವೆಚ್ಚದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿದೆ. ಈಚೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ 10 ಕೋಟಿ ರೂ. ತಕ್ಷಣ ಬಿಡುಗಡೆಗೆ ಸಚಿವರು ಒಪ್ಪಿದ್ದಾರೆ ಎಂದು ಚಂದ್ರಪ್ಪ ಹೇಳಿದರು.

ಎಂಎಲ್‌ಸಿ ಡಿ.ಟಿ. ಶ್ರೀನಿವಾಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಣ್ಣ, ಡಿಸಿ ಟಿ. ವೆಂಕಟೇಶ್, ಎಸ್‌ಪಿ ರಂಜಿತ್‌ಕುಮಾರ ಬಂಡಾರು, ಕೆಡಿಪಿ ಸದಸ್ಯರಾದ ದೀಪಿಕಾ ಸತೀಶ್, ತಿಮ್ಮಯ್ಯ, ರಂಗಸ್ವಾಮಿ, ರಾಮಚಂದ್ರ, ಖಲೀಂಉಲ್ಲಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net