

ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಸುತ್ತಿರುವ ಅಂಗನವಾಡಿ ನೌಕರರ ಮನವೊಲಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಯತ್ನ ವಿಲವಾಗಿದ್ದು ಅನಿರ್ದಿಷ್ಟಾವಧಿ ಪ್ರತಿಭಟನೆ ಮೂರನೇ ದಿನಕ್ಕೆ ಮುಂದುವರಿದಿದೆ.
ಕೆಲಸಕ್ಕೆ ಅನುಗುಣವಾಗಿ ಸಮರ್ಪಕ ವೇತನ ಮತ್ತು ಸವಲತ್ತುಗಳ ವಿತರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ ಜಿಲ್ಲಾಡಳಿತ ಭವನದ ಆವರಣದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದೆ.
ಮೋಡ ಮುಸುಕಿದ ಚಳಿಯ ವಾತಾವರಣ, ತುಂತುರು ಹನಿಗಳ ಬೀಳುತ್ತಿರುವುದರ ನಡುವೆ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಮುಂಬರುವ ಎರಡು ದಿನಗಳ ಹೋರಾಟದ ಬಳಿಕವೂ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ರಾಜಧಾನಿ ಬೆಂಗಳೂರಿಗೆ ತೆರಳಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾನಿತರು ಎಚ್ಚರಿಕೆ ನೀಡಿದ್ದಾರೆ.
ಅಂಗನವಾಡಿ ನೌಕರರಿಗೆ ವಿಶೇಷ ಭತ್ಯೆ, ಸೋಂಕಿನಿಂದ ಮೃತಪಟ್ಟವರಿಗೆ ಸೂಕ್ತ ಪರಿಹಾರ ಒದಗಿಸುವಿಕೆ, ಮೊಟ್ಟೆ ಖರೀದಿಗೆ ಹಣ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ ಒತ್ತಾಯಿಸಿದ್ದಾರೆ.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ಸಿ.ಪದ್ಮರಾಜ್ ಮಾತನಾಡಿ, ಅಂಗನವಾಡಿ ನೌಕರರ ಬೇಡಿಕೆಗಳು ಸರ್ಕಾರದ ಹಂತದಲ್ಲಿ ಚರ್ಚೆಯಾಗಬೇಕು. ಸಂಬಂಧಪಟ್ಟವರ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ನೌಕರರ ಸಂಘದ ಗೌರಿಬಿದನೂರು ತಾಲೂಕು ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಕಾರ್ಯದರ್ಶಿ ರತ್ನಮ್ಮ, ಖಜಾಂಚಿ ವೆಂಕಟಲಕ್ಷ್ಮಮ್ಮ, ಮುಖಂಡರಾದ ಜಯಮಂಗಲಾ, ನಾಗರತ್ನಾ, ಕಲ್ಪನಾ, ರಾಧಾ, ಮುಖಂಡರಾದ ಜಿ.ಸಿದ್ದಗಂಗಪ್ಪ, ಬಿ.ಎನ್.ಮುನಿಕೃಷ್ಣಪ್ಪ ಇತರರಿದ್ದರು.