ಬೇಡಿಕೆಗಳ ಈಡೇರಿಕೆಗೆ ರೈತ ಸಂಘದ ಒತ್ತಾಯ

CTD 5 RITA SANGA HRB ---2--00001
Published on



ಚಿತ್ರದುರ್ಗ: ವಿಧಾನಸಭೆ ಚುನಾವಣೆ ವೇಳೆ ಒಪ್ಪಿಗೆ ಸೂಚಿಸಿದ್ದ ರೈತ ಸಂಘದ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶೀಘ್ರದಲ್ಲಿ ಸಂಘದ ಪ್ರಮುಖರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.

ನಗರದ ಕ್ರೀಡಾ ಸಭಾಂಗಣದಲ್ಲಿ ಸೋಮವಾರ ಸಂಘದ ರಾಜ್ಯ ಕಾರ‌್ಯಕಾರಣಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಗೂ ಮೊದಲು ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರಿಗೆ ರೈತರ ಸಮಸ್ಯೆ ಪರಿಹರಿಸುವ ಕುರಿತಂತೆ ಪ್ರಣಾಳಿಕೆ ಸಿದ್ಧ ಪಡಿಸಿ 6 ತಿಂಗಳ ಕಾಲ ಸಮಯಾವಕಾಶ ನೀಡಲಾಗಿತ್ತು ಎಂದರು.

ಸಂಘ ಕರೆದಿದ್ದ ಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರು ಭಾಗವಹಿಸಿದ್ದರು. ಕಾಂಗ್ರೆಸ್ ಭರವಸೆಗಳನ್ನು ಈಡೇರಿಸುವ ಆಶ್ವಾಸನೆಯನ್ನೂ ನೀಡಿತ್ತು. ಅಂದಿನ ಸಭೆಗೆ ಬಾರದ ಬಿಜೆಪಿ ಸೋಲಿಸಲು ಸಂಘ ನಿರ್ಧರಿಸುವುದರೊಂದಿಗೆ ಐದು ಕಡೆ ರೈತ ಧುರೀಣರು ಸ್ಪರ್ಧಿಸಿದ್ದರು. ಅವರಲ್ಲಿ ಒಬ್ಬರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಈಗ ಅಧಿಕಾರ ಹಿಡಿದಿದ್ದು, ಸದ್ಯದಲ್ಲೇ ಮುಖ್ಯಮಂತ್ರಿಯನ್ನು ಭೇಟಿ ಮಾಡಲಾಗುವುದು ಎಂದು ಹೇಳಿದರು.

ಕೇಂದ್ರದ 3 ಕೃಷಿ ಕಾಯ್ದೆಗಳನ್ನು ರಾಜ್ಯದಲ್ಲಿ ರದ್ದು ಮಾಡಬೇಕು, ವಿದ್ಯುತ್ ಖಾಸಗೀಕರಣ ಪ್ರಸ್ತಾವನೆ ಹಿಂಪಡೆಯಬೇಕು. ಸ್ವಾಮಿ ನಾಥನ್ ವರದಿ ಅನ್ವಯ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಪಠ್ಯ ಪುಸ್ತಕ ಪರಿಷ್ಕರಣೆ ವೇಳೆ ಇತಿಹಾಸ ತಿರುಚಬಾರದು. ಬಗರ್‌ಹುಕ್ಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದರು.

ಎಪಿಎಂಸಿಗಳು ಹಾಗೂ ಯಶಸ್ವಿ ಯೋಜನೆ ಬಲಪಡಿಸಬೇಕು. ಖಾಸಗಿ ಶಾಲೆ ಹಾಗೂ ಆಸ್ಪತ್ರೆಗಳಲ್ಲಿ ಶುಲ್ಕ ಪಟ್ಟಿ ಹಾಕಬೇಕು. ಬೆಳೆ ವಿಮೆ, ಅತಿವೃಷ್ಟಿ, ಬರ ಪರಿಹಾರ ವಿತರಿಸಬೇಕು. ವಿದ್ಯುತ್ ಸೇವೆಗಳಿಗೆ ಆಧಾರ್ ಲಿಂಕ್ ಸ್ಥಗಿತಗೊಳಿಸಬೇಕು ಹಾಗೂ ರಾಗಿ ಖರೀದಿ ಹಣ ಬಿಡುಗಡೆ ಮಾಡುವಂತೆ ಸಿಎಂಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ನಿಯೋಗದ ಭೇಟಿ ವೇಳೆ ಸಂಬಂಧಿಸಿದ ಸಚಿವರು, ಅಧಿಕಾರಿಗಳು ಹಾಜರಿರಲು ಸೂಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ ಬಸವರಾಜಪ್ಪ, ಭರವಸೆಗಳನ್ನು ಈಡೇರಿಸದಿದ್ದರೆ ಹೋರಾಟ ಪ್ರಾರಂಭಿಸಲಾಗುವುದೆಂದು ಎಚ್ಚರಿಸಿದರು.

ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಮುಖಂಡರಾದ ಗಣೇಶ್, ಪರಮಣ್ಣನವರ್, ಚಂದ್ರಪ್ಪ, ಮಹೇಶ್, ಮುನಿಯಪ್ಪ, ಡಿಎಸ್‌ಹಳ್ಳಿ ಮಲ್ಲಿಕಾರ್ಜನ, ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net