

ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಪಾದಯಾತ್ರೆ ಚಲೋ ಮೂಲಕ ಮಂಗಳವಾರ ಹಾಸನಕ್ಕೆ ನಗರಕ್ಕೆ ಬಂದು ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.
ಜುಲೈ 21 ರಂದು ಬೆಳಿಗ್ಗೆ ಅರಸೀಕೆರೆ ತಾಲೂಕು, ಕನಕಂಚೇನಹಳ್ಳಿ ಶ್ರೀ ರಂಗನಾಥ ಸ್ವಾಮಿ ಪ್ರಸನ್ನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಚಲೋ ಕಾರ್ಯಕ್ರಮ ಪ್ರಾರಂಭ ಮಾಡಿ ಅರಸೀಕೆರೆ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು. ನಂತರ ಜುಲೈ 22 ರಂದು ದುದ್ದ ಮಾರ್ಗವಾಗಿ ದುದ್ದ ಹೋಬಳಿ ಉಪತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು. ಜುಲೈ 23ರ ಮಂಗಳವಾರ ಹಾಸನ ನಗರಕ್ಕೆ ಬಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಬೇಲೂರು ತಾಲೂಕಿನ ಹಳೇಬೀಡು ಹೋಬಳಿ ಐದಳ್ಳ ಕಾವಲು ಸರ್ವೆ ನಂ 1ರಲ್ಲಿರುವ 2550 ಎಕರೆ ಭೂಮಿಯನ್ನು ಹೋರಾಟ ಮಾಡಿದ 800 ಜನ ರೈತರ ಹೆಸರಿಗೆ ಮಾಡಿಕೊಟ್ಟು ಅವರಿಗೆ ಸಂಪೂರ್ಣವಾದ ಎಲ್ಲಾ ದಾಖಲಾತಿಯನ್ನು ಮಾಡಿಕೂಡಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ರೈತರ ದಾರಿ ತಪ್ಪಿಸಿ ಅವರವರ ಮನೆಯ ಬಾಗಿಲಿಗೆ ಹೋಗಿ ನೋಟಿಸ್ ಜಾರಿ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಅರಣ್ಯ ಅಧಿಕಾರಿಗಳು ಈ ಕೆಲಸವನ್ನು ಕೂಡಲೇ ನಿಲ್ಲಿಸಬೇಕು. ಹಾಗೂ ರೈತರ ಕೃಷಿ ಭೂಮಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಪಾದಯಾತ್ರೆಯಲ್ಲಿ ರೈತ ಸಂಘದ ಸಂಚಾಲಕ ಕನಕಂಚೇನಹಳ್ಳಿ ಪಟೇಲ್, ಪ್ರಸನ್ನ ಕುಮಾರ್, ಮೊಹಮದ್ ದಸ್ತಾಗೀರ್, ಏಜಾಜ್ ಪಾಷಾ, ಜವನಹಳ್ಳಿ ನಿಂಗಪ್ಪ, ಬೋಜರಾಜು, ನಂಜಮ್ಮ, ಲಕ್ಷ್ಮೀ ಬಸಪ್ಪ, ಕಾಂತರಾಜು, ಮೀಸೆ ಮಂಜಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.