

ಸೋಮವಾರಪೇಟೆ: ರಾಜ್ಯದಲ್ಲಿ ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬಂದು, ಮುಂದಿನ ಮೂರು ತಿಂಗಳಲ್ಲಿ ರಾಜ್ಯದ ರೈತರು ಮತ್ತು ಸ್ತ್ರೀಶಕ್ತಿ ಸಂಘಗಳ ಸದಸ್ಯರ ಸಂಪೂರ್ಣ ಸಾಲವನ್ನು ಮನ್ನಾ ಮಾಡಲು ಎಚ್.ಡಿ.ಕುಮಾರಸ್ವಾಮಿ ಮಾತುಕೊಟ್ಟಿದ್ದಾರೆ ಎಂದು ಹಾಸನ ಸಂಸದ ಹಾಗೂ ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಹೇಳಿದರು.
ಜೆಡಿಎಸ್ ಕ್ಷೇತ್ರ ಸಮಿತಿ ವತಿಯಿಂದ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಅವರು ಕೊಟ್ಟ ಭರವಸೆಗಳನ್ನೆಲ್ಲ ಈಡೇರಿಸಿದ್ದಾರೆ. ಸಮ್ಮಿಶ್ರ ಸರ್ಕಾರವಿದ್ದಾಗಲೂ ರೈತರ ಸಾಲಮನ್ನಾ ಮಾಡಿದ್ದಾರೆ. ಬಡವರು, ದೀನದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಅನೇಕ ಯೋಜನೆಗಳನ್ನು ನೀಡಿದ್ದಾರೆ ಎಂದರು.
ಕಾಫಿ ಬೆಳೆಗಾರರಿಗೆ ಕೇಂದ್ರ ಅನ್ಯಾಯ: ಕಾಫಿ ಉದ್ಯಮದಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ 12 ಸಾವಿರ ಕೋಟಿ ರೂ. ವಿದೇಶಿ ವಿನಿಮಯ ಮತ್ತು ತೆರಿಗೆಯಿಂದ ಬರುತ್ತಿದೆ. ಕೇವಲ 500 ಕೋಟಿ ರೂ.ಗಳನ್ನು ಕಾಫಿ ಮಂಡಳಿಯ ಮೂಲಕ ಕಾಫಿ ಉದ್ಯಮಕ್ಕೆ ನೀಡಿ ಎಂದು ಕೇಂದ್ರ ವಾಣಿಜ್ಯ ಮಂತ್ರಿಗೆ ಮನವಿ ಪತ್ರದ ಮೂಲಕ ಬೇಡಿಕೆಯಿಟ್ಟಿದ್ದೆ. ಆದರೆ ನನ್ನ ಮನವಿ ಪತ್ರವನ್ನು ಕಸದ ಬುಟ್ಟಿಗೆ ಹಾಕುವ ಮೂಲಕ ಕಾಫಿ ಬೆಳೆಗಾರರಿಗೆ ಕೇಂದ್ರ ಅನ್ಯಾಯ ಮಾಡಿದೆ ಎಂದು ದೂರಿದರು.
ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಕಾಫಿ ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆಗಾರರು ಸ್ವಾಭಿಮಾನಿಗಳು, ಕೈಯಿಂದ ಕೊಟ್ಟವರೆ ಹೊರತು ಬೇಡಿದವರಲ್ಲ. ಕಾಫಿ ಉದ್ಯಮ ನಶಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ಬರುವ ಆದಾಯವೂ ಸತ್ತು ಹೋಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಬಲ್ ಇಂಜಿನ್ ಸರ್ಕಾರ ಎಂದು ರಾಜ್ಯದ ಸಂಸದರು ಕೂಗುತ್ತಿದ್ದಾರೆ. ಇಂಜಿನ್ ಇಲ್ಲ ಭೋಗಿ ಮಾತ್ರ ಹೋಗುತ್ತಿದೆ. ರಾಜ್ಯ ಜಿಎಸ್‌ಟಿ ಪಾಲು ತರಲಾಗದ ಸಂಸದರಿಗೆ ಮತದಾರರು ಯಾತಕ್ಕಾದರೂ ಮತ ನೀಡುತ್ತಾರೋ ಗೊತ್ತಿಲ್ಲ. ಕಾಫಿ ಬೆಳೆಗಾರರ, ರೈತರ, ಬಡವರ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಹೇಳಲು ಸಾಧ್ಯವಿಲ್ಲದ ಸಂಸದರು ಏತಕ್ಕಾಗಿ ಎಂದು ಪ್ರಶ್ನಿಸಿದರು.
15 ದಿನದಲ್ಲೇ ನೂರಾರು ಜೆಸಿಬಿ ಕಳುಹಿಸಿ ರಸ್ತೆ ಸರಿಪಡಿಸಿ, ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಟ್ಟ ಕೀರ್ತಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಲ್ಲಬೇಕು. ಎಚ್.ಡಿ.ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿದ್ದ ಕಾಲದಲ್ಲೇ ಸೋಮವಾರಪೇಟೆ ತಾಲೂಕಿನ ರಸ್ತೆ ಅಭಿವೃದ್ಧಿಗೆ 110 ಕೋಟಿ ರೂ., ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕಿಗೆ ತಲಾ 5 ಕೋಟಿ ರೂ. ನೀಡಲಾಗಿತ್ತು. ಆ ಅನುದಾನದಲ್ಲೇ ಇಂದು ರಸ್ತೆಗಳಾಗಿವೆ ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬಹುತೇಕ ಮಂದಿ ಕಮಲ ಕಾಂಗ್ರೆಸಿಗರಿದ್ದಾರೆ. ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ಮತ ನೀಡಿದರೆ, ಕೋಮುವಾದಿ ಬಿಜೆಪಿಗೆ ಮತ ನೀಡಿದಂತೆ. ಕೋಮುಗಲಭೆಗೂ ಅವಕಾಶ ಮಾಡಿಕೊಟ್ಟಂತೆ ಎಂದರು.
ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಕುಸಿತ: ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಭ್ರಷ್ಟ ವ್ಯವಸ್ಥೆಯಿಂದ ಕೊಡಗು ಜಿಲ್ಲೆ ನಲುಗಿದೆ. ಆಡಳಿತ ವ್ಯವಸ್ಥೆ ಕುಸಿದಿದೆ. ಕಮಿಷನ್ ದಂಧೆಯಿಂದ ಎಲ್ಲ ಕಾಮಗಾರಿಗಳು ಕಳಪೆಯಾಗಿವೆ. ಕಳೆದ 28 ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿಯಲ್ಲಿ ಸಂಪೂರ್ಣ ಹಿನ್ನಡೆಯಾಗಿದೆ. ಬಿಜೆಪಿ ಕುಟುಂಬವೊಂದರ ತೆಕ್ಕೆಯಲ್ಲಿದೆ ಎಂದು ದೂರಿನ ಸುರಿಮಳೆಗೈದರು.
2018ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 7 ಬಾರಿ ಬಂದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಜಿಲ್ಲೆಯಲ್ಲೆ ವಾಸ್ತವ್ಯ ಹೂಡಿ ಜನರ ಕಷ್ಟಕ್ಕೆ ಸ್ಪಂದಿಸಿದರು. ಒಂದು ಸಾವಿರ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಬಿಜೆಪಿಯಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಜನರು ರೋಸಿಹೋಗಿದ್ದಾರೆ. ಈ ಬಾರಿ ಜೆಡಿಎಸ್‌ನ ಗೆಲವು ಶತಸಿದ್ಧ ಎಂದರು. ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್ ಮಾತನಾಡಿದರು.
ಚರ್ಚೆ ಮಾಡಿ ಸಮಸ್ಯೆ ಇತ್ಯರ್ಥ: ನಾಪಂಡ ಮುತ್ತಪ್ಪ ಅವರ ವಿರುದ್ಧ ಕ್ರಮಕೈಗೊಳ್ಳುವುದು ರಾಜಾಧ್ಯಕ್ಷರಿಗೆ ಸಂಬಂಧಪಟ್ಟ ವಿಷಯ. ಪಕ್ಷದ ಆಂತರಿಕ ವಿಷಯವನ್ನು ಪಕ್ಷದ ಮುಖಂಡರ ಸಮ್ಮುಖದಲ್ಲಿ ಚರ್ಚೆಯಾಗಬೇಕು. ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ಈ ವಿಷಯವನ್ನು ಮಾಧ್ಯಮದವರ ಮುಂದೆ ತರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಪ್ರಜ್ವಲ್ ರೇವಣ್ಣ ತಿಳಿಸಿದರು.
ಮಾಜಿ ಸಚಿವ ಬಿ.ಎ.ಜೀವಿಜಯ ಜೆಡಿಎಸ್ ತೊರೆದಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಬಸ್‌ನಿಂದ ಡ್ರೈವರ್ ಇಳಿದಿದ್ದಾರೆ. ಪ್ರಯಾಣಿಕರು ಬಸ್‌ನಲ್ಲೇ ಇದ್ದಾರೆ. ದೇವೇಗೌಡರು ಜೀವಿಜಯ ಅವರ ಮನೆಗೆ ಹೋಗಿ ಬಿ ಫಾರ್ಮ್ ಕೊಡುತ್ತಿದ್ದರು. ಈಗ ಜೀವಿಜಯ ಟಿಕೆಟ್‌ಗಾಗಿ ಮನೆ ಮನೆ ಬಾಗಿಲು ಬಡಿಯುವಂತಾಗಿದೆ ಎಂದು ಚಟಾಕಿ ಹಾರಿಸಿದರು.