

ತುಮಕೂರು: ಒಂದೆಡೆ ಜಿಲ್ಲಾಡಳಿತದ ವತಿಯಿಂದ ಸಂವಿಧಾನ ದಿನಾಚರಣೆ ನಡೆಯುತ್ತಿದ್ದರೆ ಮತ್ತೊಂದೆಡೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಟನೆ, ರೈತ ಸಂ ಹಾಗೂ ವಿಕಲಚೇತನ ಸಂದ ವತಿಯಿಂದ ಪ್ರತ್ಯೇಕವಾದ ಪ್ರತಿಭಟನೆಗಳು ನಡೆಯುತ್ತಿದ್ದವು.
ಕರ್ನಾಟಕ ರಾಜ್ಯ ವಿಕಲಚೇತನ ಹಾಗೂ ವಿವಿದೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ, ನಗರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಮಾವೇಶಗೊಂಡು, ಕಳೆದ 17 ವರ್ಷಗಳಿಂದ ಅಂಗವಿಕಲರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿರುವ ವಿಆರ್ಡಬ್ಲು, ಎಂಆರ್ಡಬ್ಲುಗಳ ಸೇವೆಯನ್ನು ಕಾಯಂ ಗೊಳಿಸಬೇಕು ಹಾಗೂ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಚಿತ್ತಯ್ಯ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ಅಡಿಯಲ್ಲಿ ಸುಮಾರು 5860 ವಿಆರ್ಡಬ್ಲು, 175ಎಂಆರ್ಡಬ್ಲು, 380 ಯುಆರ್ಡಬ್ಲುಗಳನ್ನು ನೇಮಕ ಮಾಡಿದ್ದು, ಅಂಗವಿಕಲರಾದ ನಾವುಗಳು ಕಳೆದ 17 ವರ್ಷಗಳಿಂದಲೂ ನಿರಂತರವಾಗಿ ಅಂಗವಿಕಲರನ್ನು ಗುರುತಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತಿದ್ದೇವೆ. ಆದರೆ, ಕೆಲಸ ಮಾಡಿದ ನಮಗೆ ಸೇವಾ ಭದ್ರತೆಯಿಲ್ಲ. 16 ವರ್ಷಗಳಿಂದಲೂ ಮನವಿ ಸಲ್ಲಿಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೇವಾ ಭದ್ರತೆಯ ಜತೆಗೆ ಕನಿಷ್ಠ ವೇತನಕ್ಕೆ ಒಳಪಡಿಸಬೇಕು. ಅಂಗವಿಕಲರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಹಾಗೂ ನಿವೃತ್ತಿ ಇಡಿಗಂಟು ನೀಡಬೇಕೆಂಬ ಬೇಡಿಕೆಯಿದ್ದು, ಡಿಸೆಂಬರ್ 3ರಂದು ನಡೆಯುವ ವಿಶ್ವ ಅಂಗವಿಕಲರ ದಿನದ ಒಳಗೆ ಈ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ಮೈಲಾರಪ್ಪ, ಸೌಭಾಗ್ಯ, ಚಂದ್ರಶೇಖರ್, ನಿವೇದಿತ, ನಾಗರಾಜು, ಕುಸುಮ, ಆದಿಲ್, ಮಂಜುನಾಥ್ ಇದ್ದರು.