ಬೇಡಿಕೆ ಈಡೇರಿದಿದ್ದರೆ ಅ. 2ರಿಂದ ಅನಿರ್ದಿಷ್ಟ ಅವಧಿ ಧರಣಿ

2
Published on

ಹಾಸನ: ಜಿಲ್ಲೆಯ ಕಲಾವಿದರಿಗೆ ಸಿಗಬೇಕಾದಂತಹ ಸೌಲಭ್ಯಗಳು ಹಾಗೂ ಕಲಾಭವನ ದುರಸ್ತಿ ಕಾರ್ಯ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರದಿದ್ದರೆ ಅ.2ರಿಂದ ಅನಿರ್ದಿಷ್ಟ ಅವಧಿ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಕಲಾವಿದರ ಹಿತರಕ್ಷಣ ಸಮಿತಿ ಜಿಲ್ಲಾಧ್ಯಕ್ಷ ರವಿಕುಮಾರ್.ಬಿದರೆ ಎಚ್ಚರಿಸಿದರು.

ನಗರದ ಹೃದಯ ಭಾಗದಲ್ಲಿರುವ ಹಾಸನಾಂಬ ಕಲಾಕ್ಷೇತ್ರ ಗೊಂದಲದ ಗೂಡಾಗಿದೆ. ಕಲಾಭವನ ಇದ್ದರು ಕಲಾವಿದರಿಗೆ ಯಾವುದೇ ರೀತಿ ಅನುಕೂಲವಾಗುತ್ತಿಲ್ಲ, ದುರಸ್ತಿ ಮಾಡಲೆಂದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಆದರೆ ಹಣ ಮಾತ್ರ ಖರ್ಚಾಗುತ್ತದೆ ದುರಸ್ತಿ ಕಾರ್ಯ ನಡೆಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಸಬೂಬ್ ಹೇಳುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಸೆ.25ರ ವರೆಗೆ ಕಲಾಭವನವನ್ನು ಕಾರ್ಯಕ್ರಮಕ್ಕೆ ಬಿಟ್ಟುಕೊಡಬೇಕು ಮತ್ತು ಕಲಾವಿದರಿಗೆ ತಾಲಿಮು ನಡೆಸಲು ಕೊಠಡಿ ನಿರ್ಮಾಣ ಮಾಡಿಕೊಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೇವಲ ಪ್ರಭಾರಿ ಅಧಿಕಾರಿಗಳನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ, ಇದರಿಂದ ಕಲಾವಿದರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಶಾಶ್ವತ ಅಧಿಕಾರಿಯನ್ನು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಎಲ್ಲಾ ಕಲಾವಿದರಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು ಮತ್ತು ಕಲಾಭವನದ ಬಾಡಿಗೆಯನ್ನ 15ಸಾವಿರ ರೂ. ನಿಗದಿ ಮಾಡಲಾಗಿದೆ. ಬೇರೆ ಜಿಲ್ಲೆೆಗಳಲ್ಲಿ ಕೂಡ ಕಡಿಮೆ ಮೊತ್ತದಲ್ಲಿ ಬಾಡಿಗೆ ಪಡೆಯುತ್ತಿದ್ದಾರೆ ಅದೇ ರೀತಿ ನಮ್ಮ ಜಿಲ್ಲೆಯಲ್ಲಿ ಕೂಡ 8ಸಾವಿರ ರೂ. ನಿಗದಿ ಮಾಡುವಂತೆ ಮನವಿ ಮಾಡಿದರು

ಈ ಹಿಂದೆ ಹಾಸನಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸುಮಾರು 200 ಕ್ಕೂ ಹೆಚ್ಚು ತಂಡಗಳನ್ನ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಅವರಿಗೆ ಇದುವರೆಗೂ ಕೂಡ ಅನುದಾನವನ್ನ ಬಿಡುಗಡೆ ಮಾಡಿಲ್ಲ. ತಕ್ಷಣವೇ ಇದನ್ನ ಬಿಡುಗಡೆ ಮಾಡಬೇಕು ಈ ಎಲ್ಲಾ ಬೇಡಿಕೆಗಳು ಈಡೇರದಿದ್ದರೆ, ಗಾಂಧೀ ಜಯಂತಿ ಕಾರ್ಯಕ್ರಮ ಮುಗಿಸಿ ನಂತರ ಕಪ್ಪು ಪಟ್ಟಿ ಕಟ್ಟಿಕೊಂಡು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಲಾವಿದರ ಹಿತರಕ್ಷಣ ಸಮಿತಿಯ ಕಾರ್ಯದರ್ಶಿ ರಮೇಶ್, ಕೆ. ಖಜಾಂಚಿ ರಮೇಶ್ ಗೌಡಪ್ಪ, ಕಾರ್ಯಧ್ಯಕ್ಷ ಡಿ.ವಿ. ನಾಗಮೋಹನ್, ಜನಪದ ಕಲಾವಿದ ಗ್ಯಾರಂಟಿ ರಾಮಣ್ಣ, ಸಲಹೆಗಾರ ಕೆ.ಕೆ. ರಂಗಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net