ಬೇಡಿಕೆ ಈಡೇರಿಕೆಗೆ ಸಂಘಟಿತರಾಗಿ

rangmandir - Copy
Published on

ಬೀದರ್: ಮಹಿಳಾ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸಂಘಟಿತರಾಗಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ (ಸಿಐಟಿಯು) ರಾಷ್ಟ್ರೀಯ ಅಧ್ಯಕ್ಷೆ ಕೆ. ಹೇಮಲತಾ ಹೇಳಿದರು.
ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟದ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನಡೆದ ಮಹಿಳಾ ಅಂಚೆ ನೌಕರರ ರಾಷ್ಟ್ರೀಯ ಸಮ್ಮೇಳನ ಹಾಗೂ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಘಟಿತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೇ 4 ರಷ್ಟು ಉದ್ಯೋಗಸ್ಥ ಮಹಿಳೆಯರನ್ನು ಹೊರತುಪಡಿಸಿ, ಉಳಿದವರ ಸ್ಥಿತಿ ಶೋಚನೀಯವಾಗಿದೆ. ಸುರಕ್ಷತೆ, ಕಡಿಮೆ ಸಂಬಳ, ಕೆಲಸದ ಅವಧಿ, ರಜೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ನಿವೃತ್ತ ಪೊಸ್ಟ್ ಮಾಸ್ಟರ್ ಜನರಲ್ ಡಾ. ಎಂ. ವೆಂಕಟೇಶ್ವರಲು ಮಾತನಾಡಿ, ಅಂಚೆ ಇಲಾಖೆಯಲ್ಲಿ ಮಹಿಳಾ ನೌಕರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಕಾರಣ ಮೇಲಿಂದ ಮೇಲೆ ಕಾರ್ಯಾಗಾರಗಳು ಅಗತ್ಯವಾಗಿವೆ ಎಂದರು.
ಉದ್ಯೋಗಸ್ಥ ಮಹಿಳೆಯರ ಬೇಡಿಕೆಗಳು ಪುರುಷರಿಗಿಂತ ಭಿನ್ನವಾಗಿವೆ. ಅವರ ಬೇಡಿಕೆಗಳಿಗೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ಇದೆ ಎಂದು ತಿಳಿಸಿದರು.
ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಮಾತನಾಡಿ, ಬೀದರ್‍ನಲ್ಲಿ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿರುವುದು ಸಂತಸ ಉಂಟು ಮಾಡಿದೆ. ಸಮ್ಮೇಳನ ಮಹಿಳಾ ಅಂಚೆ ನೌಕರರ ಸಮಸ್ಯೆಗಳ ಪರಿಹಾರಕ್ಕೆ ನೆರವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕಾಮ್ರೆಡ್ ಆರ್.ಎನ್. ಪರಾಶರ್ ಅವರು, ಟ್ರೇಡ್ ಯುನಿಯನ್ ಸ್ಥಾಪನೆಯ ಉದ್ದೇಶ, ಯುನಿಯನ್‍ನಿಂದ ಕೈಗೊಂಡ ಹೋರಾಟ ಹಾಗೂ ಫಲಶ್ರುತಿಗಳನ್ನು ವಿವರಿಸಿದರು.
ಓಡಿಶಾ, ಜಾರ್ಖಂಡ್, ಛತ್ತೀಸ್‍ಗಡ್, ಕೇರಳ, ತಮಿಳುನಾಡಿನ ಮಹಿಳಾ ಪ್ರತಿನಿಧಿಗಳು, ರೈಲ್ವೆ ಅಂಚೆ ಸೇವೆ ಸಿಬ್ಬಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಲಾವಿದೆ ಉಷಾ ಪ್ರಭಾಕರ ಹಾಗೂ ರಶ್ಮಿ ಶರ್ಮಾ ನೇತೃತ್ವದ ತಂಡದ ಕಲಾವಿದರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಅಖಿಲ ಭಾರತ ಅಂಚೆ ನೌಕರರ ಸಂಘ ಕರ್ನಾಟಕದ ವಲಯ ಕಾರ್ಯದರ್ಶಿ ಜಿ. ಜಾನಕಿರಾಮ, ರೈಲ್ವೆ ಅಂಚೆ ನೌಕರರ ಸಂಘದ ಕಾರ್ಯಾಧ್ಯಕ್ಷ ಎ. ಶ್ರೀನಿವಾಸ, ಬೀದರ್ ಅಂಚೆ ಅಧೀಕ್ಷಕ ಮಹಮ್ಮದ್ ಆಸಿಫ್, ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟದ ಬೀದರ್ ವಿಭಾಗದ ಅಧ್ಯಕ್ಷೆ ಮಂಗಲಾ ಭಾಗವತ್, ಕಾರ್ಯದರ್ಶಿ ಕಲ್ಲಪ್ಪ ಕೋಣಿ ಮೊದಲಾದವರು ಉಪಸ್ಥಿತರಿದ್ದರು.
ಎರಡನೇ ದಿನದ ಗೋಷ್ಠಿಯಲ್ಲಿ ಅಖಿಲ ಭಾರತ ಅಂಚೆ ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜನಾರ್ಧನ್ ಮುಜುಮದಾರ್ ಅವರು ಸಂಘಟನೆಯ ಧ್ಯೇಯೋದ್ದೇಶಗಳನ್ನು ಬಿಡಿಸಿಟ್ಟರು.
ಸಂಘಟನೆ ಮಹಿಳಾ ನೌಕರರ ಹಿತರಕ್ಷಣೆಗೆ ಶ್ರಮಿಸುತ್ತಿದೆ. ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಗುರುದ್ವಾರ ಹಾಗೂ ಹೊಟೇಲ್ ಕನಕಾದ್ರಿಯಲ್ಲಿ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಶಾಹೀನ್ ಶಿಕ್ಷಣ ಸಂಸ್ಥೆ ವತಿಯಿಂದ ಐತಿಹಾಸಿಕ ಸ್ಥಳಗಳ ವೀಕ್ಷಣೆಗೆ ವಾಹನ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಮ್ಮೇಳನ ಅಚ್ಚುಕಟ್ಟಾಗಿ ಸಂಘಟಿಸಿದ್ದಕ್ಕೆ ಪ್ರತಿನಿಧಿಗಳು ಸಂತಸ ವ್ಯಕ್ತಪಡಿಸಿದರು.
ಮಳೆಯ ಮಧ್ಯೆಯೂ ಕರ್ನಾಟಕ ಸೇರಿ ದೇಶದ 22 ರಾಜ್ಯಗಳ 426 ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಸಮಿತಿಗೆ ಭಾಗವತ್ ಅಧ್ಯಕ್ಷೆ: ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟದ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಮಂಗಲಾ ಭಾಗವತ್ ಆಯ್ಕೆಯಾಗಿದ್ದಾರೆ.
ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟದ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ ಮಹಿಳಾ ಅಂಚೆ ನೌಕರರ ರಾಷ್ಟ್ರೀಯ ಸಮ್ಮೇಳನದಲ್ಲಿ ಒಕ್ಕೂಟದ ಮಹಿಳಾ ಸಮಿತಿ ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳು: ಸರಯು ಬ್ರಹ್ಮಭಟ್ ಗುಜರಾತ್ (ಉಪಾಧ್ಯಕ್ಷೆ),  ಜಾಸ್ಮಿನ್ ಬೇಗಂ ತಮಿಳುನಾಡು (ಜಂಟಿ ಸಂಚಾಲಕಿ), ಬಿನಿತಾ ಸೇನ್ ಪಶ್ಚಿಮ ಬಂಗಾಳ (ಉಪ ಸಂಚಾಲಕಿ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net