

ಅರಕಲಗೂಡು: ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಎಪಿಎಂಸಿ ಮಾರುಕಟ್ಟೆಯಿಂದ ಹೊರಟ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ಸಾಗಿ ಕೆಲಕಾಲ ಧರಣಿ ನಡೆಸಿದರು.
ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ರೈತರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಕೃಷಿಯಿಂದ ನಷ್ಟಕ್ಕೊಳಗಾದ ರೈತರು ಹೈನುಗಾರಿಕೆಯಿಂದ ಜೀವ ಉಳಿಸಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಾನುವಾರುಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಸರ್ಕಾರದ ನಿರ್ಲಕ್ಷೃ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ. ಸಣ್ಣಪುಟ್ಟ ವಿಚಾರಗಳಿಗೂ ಜಿಲ್ಲಾ ಕೇಂದ್ರಕ್ಕೆ ತೆರಳುವಂತೆ ಸೂಚಿಸುತ್ತಾರೆ. ಸರ್ಕಾರ 7 ಗಂಟೆಗಳ ಕಾಲ ವ್ಯವಸ್ಥಿತವಾಗಿ ವಿದ್ಯುತ್ ಸರಬರಾಜು ಮಾಡುವಂತೆ ಸೂಚಿಸಿದ್ದರೂ ವಿದ್ಯುತ್ ಇಲಾಖೆ ಸರಬರಾಜಿನಲ್ಲಿ ಕಣ್ಣಾಮುಚ್ಚಾಲೆ ನಡೆಸುತ್ತಿದೆ. ಇದರಿಂದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ಬೆಳೆ ಒಣಗಿ ಹಾಳಾಗುತ್ತಿದೆ. ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಇನ್ನೂ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಬಳಿಕ ಗ್ರೇಡ್-2 ತಹಸೀಲ್ದಾರ್ ಮೋಹನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ಎಚ್.ಆರ್.ದಿನೇಶ್, ಮುಖಂಡರಾದ ರವಿಕುಮಾರ್, ನವೀನ್‌ಕುಮಾರ್, ರಾಮೇಗೌಡ, ಕೃಷ್ಣೇಗೌಡ, ರಘು, ಸಚಿನ್ ಮುಂತಾದವರು ಪಾಲ್ಗೊಂಡಿದ್ದರು.