ಬೆಳಗಾವಿ: ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕಿ ಲತಾಕುಮಾರಿ ಅವರ ವರ್ಗಾವಣೆ ಕೈ ಬಿಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ತಾಲೂಕು ಒಕ್ಕೂಟದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಲಾಯಿತು.
ಲತಾಕುಮಾರಿ ಅವರನ್ನು ಅದೇ ಹುದ್ದೆಯಲ್ಲೇ ಮುಂದುವರಿಸಬೇಕು. 15 ವರ್ಷಗಳಿಂದ ವಿಕಲಚೇತನರಿಗಾಗಿಯೇ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್‌ಡಬ್ಲುೃ, ವಿಆರ್‌ಡಬ್ಲುೃ, ಯುಆರ್‌ಡಬ್ಲುೃ ಕಾರ್ಯಕರ್ತರನ್ನು ವಿಶೇಷ ನಿಯಮಾವಳಿ ರಚಿಸಿ ಕಾಯಂಗೊಳಿಸಬೇಕು ಮತ್ತು ನಿವೃತ್ತಿ ಇಡಿಗಂಟು ಜಾರಿಗೊಳಿಸಬೇಕು. ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕರ್ತವ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರಿಗೆ ವೇತನ ಸಹಿತ ಪ್ರಸೂತಿ ರಜೆ ನೀಡಬೇಕು.
ಮಾರ್ಗಸೂಚಿ ತಿದ್ದುಪಡಿ ಮಾಡಬೇಕು. ಹೊಸ ತಾಲೂಕುಗಳು, ಗ್ರಾಪಂಗಳು, ನಗರ ಪಟ್ಟಣ, ಪುರಸಭೆಗಳಿಗೆ ಎಂ.ಆರ್.ಡಬ್ಲುೃ, ವಿಆರ್‌ಡಬ್ಲುೃ, ಯುಆರ್‌ಡಬ್ಲುೃ ಅವರನ್ನು ನೇಮಿಸಬೇಕು. ಅಂಗವಿಕಲರಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಬೇಕು ಮತ್ತು ರಾಜ್ಯಾದ್ಯಂತ ಉಚಿತ ಬಸ್‌ಪಾಸ್ ನೀಡಬೇಕು. ಎಂ.ಆರ್.ಡಬ್ಲುೃ, ವಿಆರ್‌ಡಬ್ಲುೃ, ಯುಆರ್‌ಡಬ್ಲುೃ ಅವರ ಮರಣ ಪರಿಹಾರ ಧನವನ್ನು ಕ್ರಮವಾಗಿ 30 ಲಕ್ಷ ರೂ., 25 ಲಕ್ಷ ರೂ. ನೀಡಬೇಕು.
ಪ್ರತಿ ಜಿಲ್ಲೆಗೆ ಒಬ್ಬ ಜಿಲ್ಲಾ ಸಂಯೋಜಕರನ್ನು ನೇಮಿಸಬೇಕು ಹಾಗೂ ಅರ್ಹ ಅಂಗವಿಕಲರನ್ನು ಈ ಹುದ್ದೆಗಳಿಗೆ ನೇಮಿಸಬೇಕು. ವಿಕಲಚೇತನರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು. ಎ.ಜಿ. ದೇವರಮನಿ, ಜಿ.ಎಸ್. ಡೊಳ್ಳಿನ, ಎಚ್.ಎ. ಮುಲ್ಲಾ, ಎಂ.ಬಿ. ಹುಣಸಿಕಟ್ಟಿ, ಬಿ.ವೈ. ಅಬ್ಬಾಯಿ, ಬಿ.ಬಿ. ಗಿರಡ್ಡಿ, ಎಸ್.ಎಸ್. ಹಾಸಟ್ಟಿ, ಆರ್.ಎಂ. ಬಿರಾದಾರಗೌಡ್ರ ಇತರರಿದ್ದರು.