

ಬೋರಗಾಂವ: ಸ್ವಚ್ಛತೆಗೆ ಆದ್ಯತೆ ನೀಡುತ್ತಿರುವ ಪೌರ ಕಾರ್ಮಿಕರ ಬೇಡಿಕೆ ಪೂರ್ಣಗೊಳಿಸುವಂತೆ ಪಟ್ಟಣದ ಪೌರ ಕಾರ್ಮಿಕರು ಮಂಗಳವಾರ ಪಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರುಕ್ಮನ್ ಗಜರೆ ಮತ್ತು ಅರುಣ ಶಿಂಗೆ ಮಾತನಾಡಿ, ಕಳೆದ ೧೦ ವರ್ಷಗಳಿಂದ ಸ್ವಚ್ಛತಾ ಕೆಲಸ ಮಾಡುತ್ತಿದ್ದೇವೆ. ಕರೊನಾ ಲಾಕ್‌ಡೌನ್ ಸಮಯದಲ್ಲಿ ನಮ್ಮ ಬಗ್ಗೆ ಕಾಳಜಿ ವಹಿಸದೆ ಕೆಲಸ ಮಾಡಿದ್ದೇವೆ. ನಮ್ಮ ಕೆಲವು ಬೇಡಿಕೆಗಳಿದ್ದು, ನಮ್ಮನ್ನು ಕೆಲಸದಲ್ಲಿ ಕಾಯಂಗೊಳಿಸಿ, ಸರ್ಕಾರದ ಎಲ್ಲ ಸೌಲಭ್ಯ ನೀಡಬೇಕು. ಸಮಾನ ವೇತನ ಬೇಡಿಕೆಗಾಗಿ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಆದರೆ, ಯಾವುದೇ ಬೇಡಿಕೆ ಈಡೇರಿಲ್ಲ ಎಂದರು. ಪೌರ ಕಾರ್ಮಿಕರ ಜತೆಗೆ ನೀರು ಸರಬರಾಜು ಕಾರ್ಮಿಕರು, ವಾಹನ ಚಾಲಕರು, ಕ್ಲೀನರ್, ಕಾವಲುಗಾರರು ಸೇರಿ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪೌರಕಾರ್ಮಿಕ ಸಂಘದ ಅಧ್ಯಕ್ಷ ಪಿಂಟು ಕಾಂಬಳೆ, ಉಪಾಧ್ಯಕ್ಷೆ ಭಾರತಿ ವಸವಾಡೆ, ಸದಸ್ಯರಾದ ಅಭಯಕುಮಾರ ಮಗದುಮ್, ತುಳಸಿದಾಸ ವಸವಾಡೆ, ದಿಗಂಬರ ಕಾಂಬಳೆ, ಅಮರ ಶಿಂಗೆ, ಇಂದ್ರಜಿತ್ ಪವಾರ, ಮುಖ್ಯಾಧಿಕಾರಿ ಎಸ್. ಬಿ.ತೊಡಕರ್ ಭೇಟಿ ನೀಡಿದರು. ಹಿಮ್ಮತ್ ಅಫರಾಜ್, ಸಂಜಯ ಭೋರೆ, ನಚಿಕೇತ ಮಾನ್ವಿ, ಸುನೀತಾ ಐದಮಾಳೆ, ವೇದಾ ದೇಸಾಯಿ, ಮಹಾದೇವಿ ಹಿರೇಮನಿ, ಉಷಾ ವರಾಳೆ, ಮಹಾದೇವ ಕಾಂಬಳೆ ಇತರರಿದ್ದರು.