

ಮೈಸೂರು: ಟನ್ ಕಬ್ಬಿಗೆ 4500 ರೂ. ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವೃತ್ತದಿಂದ (ಗನ್‌ಹೌಸ್) ಜಿಲ್ಲಾಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿದರು.
ಒಂದು ಟನ್ ಕಬ್ಬಿಗೆ ಶೇ.9 ಇಳುವರಿಗೆ ಕನಿಷ್ಠ 4500 ರೂ. ಬೆಲೆ ನೀಡಬೇಕು. ಭತ್ತದ ಖರೀದಿ ಕೇಂದ್ರ ತೆರೆಯಬೇಕು. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಕ್ವಿಂಟಾಲ್ ಭತ್ತಕ್ಕೆ ಕನಿಷ್ಠ 500 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು. ಜಲಜೀವನ್ ಮಿಷನ್ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಮನೆಗಳ ನಲ್ಲಿಗಳಿಗೆ ಮೀಟರ್ ಅಳವಡಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ತಿ.ನರಸೀಪುರ ತಾಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರ ಜೀವಕ್ಕೆ ಕುತ್ತು ಬಂದಿದೆ. ಕಾಡುಪ್ರಾಣಿಗಳಿಂದ ಆಗುವ ಜೀವ ನಷ್ಟಕ್ಕೆ ಕನಿಷ್ಠ 20 ಲಕ್ಷ ರೂ. ಪರಿಹಾರ ನೀಡಬೇಕು. ಕುರಿ, ಆಡುಗಳಿಗೆ ಕಾಡುಪ್ರಾಣಿಗಳಿಂದ ಆಗುವ ಜೀವ ನಷ್ಟಕ್ಕೆ ಕನಿಷ್ಠ 20 ಸಾವಿರ ರೂ., ಹಸು, ಎಮ್ಮೆ, ಎತ್ತು ಜೀವ ಹಾನಿಗೆ ಕನಿಷ್ಠ ಒಂದು ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮೈಸೂರು ಹಾಲು ಉತ್ಪಾದಕರ ಒಕ್ಕೂಟ ಏರಿಕೆ ಮಾಡಿರುವ ಪಶು ಆಹಾರ ಬೆಲೆಯನ್ನು ತಕ್ಷಣವೇ ಇಳಿಸಬೇಕು, ರಾಜ್ಯಾದ್ಯಂತ ರೈತರಿಂದ ಖರೀದಿಸುವ ಹಾಲಿನ ದರವನ್ನು ಕನಿಷ್ಠ 45 ರೂ.ಗಳನ್ನು ನಿಗದಿಮಾಡಬೇಕು. ಗ್ರಾಮೀಣ ಯುವಕ-ಯುವತಿಯರ ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸಲು ಯಾವುದೇ ಭದ್ರತೆ ಇಲ್ಲದೆ ಸ್ವಯಂ ಉದ್ಯೋಗ ಮಾಡಲು ಬ್ಯಾಂಕುಗಳಿಂದ 10ಲಕ್ಷ ರೂ. ಸಾಲ ನೀಡಬೇಕು ಎಂದು ಆಗ್ರಹಿಸಿದರು.
ನಂಜನಗೂಡು ತಾಲೂಕಿನ ತಾಂಡ್ಯ, ಹಿಮ್ಮಾವು, ಅಡಕನಹಳ್ಳಿ, ಕಡಕೊಳ ಮತ್ತು ಕಲ್ಲಹಳ್ಳಿ ಕತ್ವಾಡಿಪುರ ಕೈಗಾರಿಕೆ ಪ್ರದೇಶದಲ್ಲಿ ಕೆಐಎಡಿಬಿಗೆ ವಶಪಡಿಸಿಕೊಂಡಿರುವ ಸಾವಿರಾರು ಎಕರೆ ಜಮೀನು ಕೈಗಾರಿಕೆ ನಿರ್ಮಾಣವಾಗದೆ ಪಾಳು ಬಿದ್ದಿದೆ. ಹೀಗಾಗಿ ಜಮೀನು ಕಳೆದುಕೊಂಡ ರೈತರ ಮಕ್ಕಳು ನಿರುದ್ಯೋಗಿಗಳಾಗುವ ಪರಿಸ್ಥಿತಿ ಬಂದಿದೆ. ಈ ಕೂಡಲೇ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರುದ್ಯೋಗಿ ಯುವಕ-ಯುವತಿಯರಿಗೆ ಕಾಯಂ ಉದ್ಯೋಗ ನೀಡಬೇಕು. ಈಗ ನಿರ್ಮಾಣವಾಗಿರುವ ಕಂಪನಿಗಳಲ್ಲಿ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ, ಸ್ಥಳೀಯ ನಿರುದ್ಯೋಗಿಗಳಿಗೆ ಕಾಯಂ ಉದ್ಯೋಗ ನೀಡಬೇಕು ಎಂದರು.
ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಟಿ.ಆರ್.ವಿದ್ಯಾಸಾಗರ್, ಕೆ.ಟಿ.ಗಂಗಾಧರ್, ರಘು ಇಮ್ಮಾವು, ಸತೀಶ್ ಸಿಂಧುವಳ್ಳಿ, ಶಂಕರನಾಯಕ ಹೆಡತಲೆ, ರವಿರಾಜ್, ಮಂಜುಕಿರಣ್, ಕಳ್ಳಿಪುರ ಮಹದೇವಸ್ವಾಮಿ, ಕೃಷ್ಣೇಗೌಡ, ನಾಗರಾಜು ಅಹಲ್ಯ, ಬಂಗಾರಸ್ವಾಮಿ, ರಘುಪತಿನಾಯಕ, ಶಿರಮಳ್ಳಿ ಮಂಜುನಾಥ್, ಸ್ವಾಮಿರಾಜ್ ಅತ್ತಹಳ್ಳಿ ಇತರರು ಇದ್ದರು.