

ಬೆಳಗಾವಿ: ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಒಬಿಸಿಯ 3ಬಿ ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯಿಸಿ ಆ.1ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯದ ಬಡ ಮಕ್ಕಳು, ಶಿಕ್ಷಣ, ಉದ್ಯೋಗ, ವಸತಿ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲ ಸಮುದಾಯಗಳಿಗೂ ಸಿಗುತ್ತಿರುವ ಅವಕಾಶ ನಮ್ಮ ಸಮುದಾಯದ ಮಕ್ಕಳಿಗೆ ಲಭಿಸುವಂತೆ ಸರ್ಕಾರ ನ್ಯಾಯಯುತವಾಗಿ ಸಲ್ಲಬೇಕಾದ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಮತ್ತು ಕೇಂದ್ರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿರುವ ತಿಗಳ, ಈಡಿಗ, ಒಕ್ಕಲಿಗ, ದೇವಾಂಗ ಮತ್ತು ಬಲಿಜ ಸಮುದಾಯಗಳಿಗಿಂತ ಹಿಂದುಳಿದಿದ್ದರೂ ನಮ್ಮ ಸಮುದಾಯವನ್ನು ಇಂದಿಗೂ ಮೀಸಲಾತಿಯಿಂದ ವಂಚಿಸಲಾಗಿದೆ. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಗೋವಾದಲ್ಲಿ ನಮ್ಮ ಸಂಘಟನೆ ಅಸ್ತಿತ್ವದಲ್ಲಿದೆ.
ಎಲ್ಲ ರಾಜ್ಯಗಳಲ್ಲಿಯೂ ಹೋರಾಟ ನಡೆಸಿ, ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು. ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ವೀರಶೈವ ಲಿಂಗಾಯತರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದಿದಿದ್ದೇನೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಉಸ್ತುವಾರಿ ಪದಾಧಿಕಾರಿ ರುದ್ರಣ್ಣ ಹೊಸಕೇರಿ ಮಾತನಾಡಿ, ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಸೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇವಲ ಭರವಸೆ ನೀಡುತ್ತಿದ್ದಾರೆ. ಹೊರತು ಈವರೆಗೂ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸುಜಿತ ಮುಳಗುಂದ, ಸೋಮಲಿಂಗ ಮಾವಿನಕಟ್ಟಿ, ಜ್ಯೋತಿ ಬಾದಾಮಿ ಹಾಗೂ ರಮೇಶ ಕಳಸನ್ನವರ ಮತ್ತಿತರರು ಇದ್ದರು.