ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಪ್ರತಿಭಟನೆ

Published on

ಹಾಸನ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಿಯಮ ಮೀರಿ ಹೊರಡಿಸಿರುವ ಪ್ರಕಟಣೆ ರದ್ದುಪಡಿಸಿ ಅರ್ಹ ಅಂಗನವಾಡಿ ನೌಕರರಿಗೆ ಬಡ್ತಿ ನೀಡಿ ವರ್ಗಾವಣೆ ನೀಡಬೇಕು ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಒತ್ತಾಯಿಸಿದರು.


ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಎದುರು ಗುರುವಾರ ಸಿಐಟಿಯು ನೇತೃತ್ವದಲ್ಲಿ ನಡೆದ ಅಂಗನವಾಡಿ ನೌಕರರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಹ ಸಹಾಯಕಿಯರಿಗೆ ಬಡ್ತಿ ನೀಡಿ ನಿಯೋಜಿಸಬೇಕು, ವರ್ಗಾವಣೆ ಅರ್ಜಿಗಳಿದ್ದರೆ ಪುರಸ್ಕರಿಸಬೇಕು ಎಂಬ ನಿಯಮ ಇದೆ. ಆದರೆ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣನವರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಸರ್ಕಾರಿ ನಿಯಮ ಮೀರಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಹೊಳೆನರಸೀಪುರ ತಾಲೂಕಿನಲ್ಲಿ ಸರ್ಕಾರಿ ನಿಯಮಗಳಿಗೆ ಬೆಲೆ ಇಲ್ಲದಂತಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಜುಲೈ 13 ರಂದು ಹೊಳೆನರಸೀಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ನೌಕರರು ಮತ್ತು ಮುಖಂಡರನ್ನು ಶಾಸಕ ಎಚ್.ಡಿ. ರೇವಣ್ಣನವರು ಏಕವಚನದಲ್ಲಿ ನಿಂದಿಸಿದ್ದಾರೆ. ನೌಕರರ ಬೇಡಿಕೆ ಈಡೇರಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳ ಮೇಲೆ ಒತ್ತಡ ತಂದು ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಸ್ಥಾನಗಳಿಗೆ ಹೊಸದಾಗಿ ನೇಮಕ ಮಾಡಿಕೊಳ್ಳಲು ನಿಯಮ ಮೀರಿ ಪ್ರಕಟಣೆ ಹೊರಡಿಸಲು ಕಾರಣರಾಗಿದ್ದಾರೆ ಎಂದು ದೂರಿದರು.


ಅಂಗನವಾಡಿ ನೌಕರರಿಗೆ ಸರ್ಕಾರ ಕಳೆದ 6 ತಿಂಗಳಿಂದ ಸರಿಯಾಗಿ ಗೌರವಧನ ನೀಡುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ ಅಂಗನವಾಡಿ ನೌಕರರಿಗೆ ಯಾವುದೇ ಸೌಲಭ್ಯಗಳನ್ನು ಸರ್ಕಾರ ನೀಡಲಿಲ್ಲ. ನಿವೃತ್ತರಾದ ಅಂಗನವಾಡಿ ನೌಕರರಿಗೆ ಸರ್ಕಾರ ಭರವಸೆ ನೀಡಿದಂತೆ ಇದುವರೆಗೂ ಇಡುಗಂಟು ಕೊಟ್ಟಿಲ್ಲ. ಕನಿಷ್ಟವೇತನ, ಗ್ರಾಚ್ಯುಟಿ, ನಿವೃತ್ತಿವೇತನ, ಭವಿಷ್ಯ ನಿಧಿ, ವಿಮೆ ಯಾವುದೇ ಸೌಲಭ್ಯಗಳಿಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಎಂ.ಜಿ. ಪೃಥ್ವಿ, ಆರ್‌ಪಿಐ ಸತೀಶ್, ಸೋಮಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net