

ಗದಗ: ಎನ್ಪಿಎಸ್ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಬುಧವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ಎದುರುಗಡೆ ಬುಧವಾರ ಪ್ರತಿಭಟನೆ ನಡೆಸಿದರು.
ಅಂಗನವಾಡಿ ನೌಕರರ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಮಾತನಾಡಿ, 45 ವರ್ಷಗಳಿಂದ ಕೆಲಸ ಮಾಡುತ್ತಿರುವ ಅಂಗನನಾಡಿ ಕಾರ್ಯಕರ್ತೆಯರು, ಸಹಾಯಕರಿಗೆ ಕಾಯಂ ಪಿಂಚಣಿ ಯೋಜನೆ ಜಾರಿಗೊಳಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿವೆ. 2012ರಲ್ಲಿ ಜಾರಿಗೆ ತಂದ ಎನ್ಪಿಎಸ್ (ನ್ಯೂ ಪೆನ್ಷೆನ್ ಸ್ಕೀಮ್ ಸಂಸ್ಥೆ ಮುಚ್ಚಿ ಹೋಗಿದೆ. ಇದರಿಂದ ಈ ಅವಧಿಯಲ್ಲಿ ನಿವೃತ್ತಿಯಾಗುತ್ತಿರುವ ಕಾರ್ಯಕರ್ತೆಯರು, ಸಹಾಯಕಿಯರಿಗೆ ಎನ್ಪಿಎಸ್ ಹಣ ಬರುತ್ತಿಲ್ಲ. ಈ ಸಮಸ್ಯೆಯನ್ನು ರಾಜ್ಯ ಸರ್ಕಾರ ತಕ್ಷಣ ಬಗೆಹರಿಸಬೇಕು. ಇಲ್ಲದಿದ್ದರೆ ಅಂಗನವಾಡಿ ನೌಕರರಿಂದ ಆಗಸ್ಟ್ನಿಂದ ಅಸಹಕಾರ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಹೇಳಿದರು.
ಸಂಘಟನೆ ತಾಲೂಕಾಧ್ಯಕ್ಷೆ ಸಾವಿತ್ರಿ ಸಬನೀಸ್ ಮಾತನಾಡಿ, ಅಂಗನವಾಡಿ ಕೇಂದ್ರಗಳು, ಕಾರ್ಯಕರ್ತೆಯರು, ಸಹಾಯಕರಿಗೆ ಕರೊನಾ ಸಂರಕ್ಷಣೆ ಸಾಮಗ್ರಿ ಒದಗಿಸಬೇಕು. ಗುಣಮಟ್ಟದ ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್ಗಳನ್ನು ಒದಗಿಸಬೇಕು. ಕರೊನಾ ಸೇನಾನಿಗಳಿಗೆ 25000 ರೂ. ಪ್ರೋತ್ಸಾಹಧನ, ಬಸ್ ಪಾಸ್, ಊಟದ ವೆಚ್ಚ, ನಿವೃತ್ತಿ ಸೌಲಭ್ಯ ಕೊಡಬೇಕು ಎಂದು ಒತ್ತಾಯಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಿನೇಶಗೆ ಮನವಿ ಸಲ್ಲಿಸಿದರು.
ಉಪಾಧ್ಯಕ್ಷ ಡಿ.ಎಚ್. ರಡ್ಡೇರ, ಪ್ರಧಾನ ಕಾರ್ಯದರ್ಶಿ ವಿಜಯಾ ಪಾಟೀಲ, ಶಂಕ್ರಮ್ಮ ಕೋಳಿವಾಡ, ಅಕ್ಕಮ್ಮ ನರೇಗಲ್ಲ, ಮೆಹಬೂಬಿ ಅತ್ತಿಕಟ್ಟಿ, ಜ್ಯೋತಿ ಬಾಳಿಹಳ್ಳಿಮಠ, ಶಿವಲೀಲಾ ಕರಕಿಕಟ್ಟಿ, ಶೋಭಾ ಅಂಗಡಿ, ಸುಮಂಗಲಾ ಗಿಡ್ಡಮಲ್ಲಣ್ಣವರ, ಮಲ್ಲಮ್ಮ ಯಲಿಶಿರುಂದ, ತ್ರಿವೇಣಿ ಸವದಿ, ಶಾರದಾ ತೋಟದ, ಇತರರಿದ್ದರು.