ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 6 ರಿಂದ ಅನಿರ್ದಿಷ್ಟಾವಧಿ ಮುಷ್ಕರ

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಕರ್ನಾಟಕ ರಾಜ್ಯ ಹೊರ ಗುತ್ತಿಗೆ ಪೌರ ನೀರು ಸರಬರಾಜು ನೌಕರರ ಸಂಘದ ತಾಲೂಕು ಅಧ್ಯಕ್ಷ ಕೇಶವಮೂರ್ತಿ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಕರ್ನಾಟಕ ರಾಜ್ಯ ಹೊರ ಗುತ್ತಿಗೆ ಪೌರ ನೀರು ಸರಬರಾಜು ನೌಕರರ ಸಂಘದ ತಾಲೂಕು ಅಧ್ಯಕ್ಷ ಕೇಶವಮೂರ್ತಿ.
Published on

ಬೇಲೂರು: ಹೊರಗುತ್ತಿಗೆ ಪೌರ ನೀರು ಸರಬರಾಜು ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹೊರ ಗುತ್ತಿಗೆ ಪೌರ ನೀರು ಸರಬರಾಜು ನೌಕರರ ಸಂಘ ಅ.6ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಕೇಶವಮೂರ್ತಿ ಹೇಳಿದರು.

ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ನೀರು ಸರಬರಾಜು ವಿಭಾಗದ ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಂಘದಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನೇರ ನೇಮಕಾತಿ, ನೇರ ಹಣ ಪಾವತಿ ಮತ್ತು ಸೇವಾ ಭದ್ರತೆ ಪ್ರಮುಖ ಬೇಡಿಕೆಯಾಗಿದೆ. ಹಲವು ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಇನ್ನೂ ಭರ್ತಿ ಮಾಡಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಈವರೆಗೆ ಮುಷ್ಕರ ಮಾಡದ ನೌಕರರು, ಸರ್ಕಾರದ ವಿಳಂಬ ನೀತಿ ಧೋರಣೆಗೆ ಬೇಸತ್ತು ಹೋರಾಟಕ್ಕೆ ಇಳಿದಿದ್ದಾರೆ ಎಂದು ಹೇಳಿದರು.

ಈಗಾಗಲೇ 60 ಸಾವಿರ ಪೌರ ಕಾರ್ಮಿಕರನ್ನು ನೇಮಕ ಮಾಡಲಾಗಿದೆ. ನಮ್ಮ ಕಷ್ಟಗಳಿಗೆ ಪರಿಹಾರ ಸಿಕ್ಕಿಲ್ಲ. ರಾಜ್ಯದಲ್ಲಿ ನಾವು 6 ಸಾವಿರ ನೀರು ಸರಬರಾಜುದಾರರಿದ್ದು ಬೇಲೂರು ಪುರೆಭೆಯಲ್ಲಿ 29 ಹೊರ ಗುತ್ತಿಗೆ ನೌಕರರಿದ್ದು, ಇಲ್ಲಿಯವರೆಗೂ ಗುತ್ತಿಗೆದಾರ ನಮ್ಮ ಕಷ್ಟ ಸುಖ ವಿಚಾರಿಸಿಲ್ಲ. ಎರಡೂವರೆ ವರ್ಷದಿಂದ ಗುತ್ತಿಗೆದಾರ ಪಿಎಫ್ ಹಾಗೂ ಇಪಿಎಫ್ ಹಣ ಕಟ್ಟಿಲ್ಲ. ನಮಗೆ ಏನೇ ತೊಂದರೆಯಾದರೂ ನಾವೆ ಜವಾಬ್ದಾರರಾಗಬೇಕಿದೆ. ಹಬ್ಬ, ಕರೊನಾ ಸಂದರ್ಭ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಆದ್ದರಿಂದ ಸರ್ಕಾರ, ಜನಪ್ರತಿನಿಧಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅ.6 ರಂದು ಸಂಪೂರ್ಣವಾಗಿ ಕೆಲಸ ನಿಲ್ಲಿಸಿ ಪ್ರತಿಭಟನೆಗೆ ತೆರಳುತ್ತಿದ್ದೇವೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಸುನೀಲ್ ನಿರ್ದೇಶಕರಾದ ಸರಸಿಂಹ, ನರಸಿಂಹಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net