ಬೇಡ ಹಕ್ಕಿ ಜ್ವರದ ಆತಂಕ

CTD ADC ---
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಹಕ್ಕಿಜ್ವರದ ಯಾವುದೇ ಪ್ರಕರಣ ಈವರೆಗೂ ವರದಿಯಾಗಿಲ್ಲ, ಯಾವುದೇ ಆತಂಕ ಬೇಡ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ನಾಗರಿಕರಿಗೆ ಮನವಿ ಮಾಡಿದರು.

ಡಿಸಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಟ್ಟದ ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಪ್ರಕರಣಗಳು ವರದಿಯಾಗದಿದ್ದರೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಕ್ಕಿಜ್ವರ ತಡೆಗೆ ರ‌್ಯಾಪಿಡ್ ರೆಸ್ಪಾನ್ಸ್ ತಂಡ ಸ್ಥಾಪಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿ ಜ್ವರ ಖಚಿತಪಟ್ಟಿದ್ದು, ಗಡಿ ಪ್ರದೇಶದಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ಸೂಕ್ತ ನಿಗಾ ವಹಿಸಬೇಕು. ಕೋಳಿಫಾರಂಗಳಿಗೆ ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸ ಬೇಕು. ಮಾಂಸದ ಅಂಗಡಿಗಳಲ್ಲಿ ಸ್ವಚ್ಛತೆ ಒತ್ತು ಹಾಗೂ ವೈಜ್ಞಾನಿಕ ತ್ಯಾಜ್ಯವಿಲೇವಾರಿ ಆಗಬೇಕು. ಸ್ವಚ್ಛತೆ ಪಾಲಿಸದ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎನ್. ಕುಮಾರ್ ಮಾತನಾಡಿ, ನಾಟಿಕೋಳಿ, ಫಾರಂ ಕೋಳಿ, ಟರ್ಕಿ ಕೋಳಿ, ಕೌಜುಗನ ಹಕ್ಕಿ, ನವಿಲು, ಬಾತುಕೋಳಿ, ಹಂಸ ಮೊದಲಾದ ಹಕ್ಕಿ-ಪಕ್ಷಿಗಳಲ್ಲಿ ಹಕ್ಕಿ ಜ್ವರ ಕಾಣಿಸುತ್ತದೆ ಎಂದರು.

ಕೋಳಿ, ಪಕ್ಷಿಗಳ ಹಠಾತ್ ಸಾವು, ಕೋಳಿಗಳ ಮೊಣಕಾಲು ಮತ್ತು ಪಾದಗಳು ನೀಲಿ ಬಣ್ಣಕ್ಕೆ ತಿರುಗುವುದು ಇದರ ರೋಗ ಲಕ್ಷಣವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಮೃತಪಟ್ಟರೆ ಕೂಡಲೇ ಮಾಹಿತಿ ನೀಡಬೇಕು. ಚೆನ್ನಾಗಿ ಬೇಯಿಸಿದ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಬಹುದುಬ ಎಂದರು.

ಜಿಲ್ಲೆಯಲ್ಲಿ 337 ಕೋಳಿ ಫಾರಂಗಳಿವೆ. ಮಾಂಸ ಮತ್ತು ಮೊಟ್ಟೆ ಕೋಳಿಗಳು ಸೇರಿ ಅವುಗಳ ಸಂಖ್ಯೆ 60.37 ಲಕ್ಷ ಇವೆ. ಅಂದಾಜು 9 ಲಕ್ಷ ನಾಟಿ ಕೋಳಿಗಳಿವೆ. ಮೊಳಕಾಲ್ಮೂರು ತಾಲೂಕಲ್ಲಿ ಅಂದಾಜು 34 ಲಕ್ಷ ಕೋಳಿಗಳಿವೆ. ಚಳ್ಳಕೆರೆ ತಾಲೂಕಿನ ನಾಗಪ್ಪನಹಳ್ಳಿ ಗೇಟ್, ಹಿರಿಯೂರು ತಾಲೂಕಿನ ಪಿಡಿ ಕೋಟೆ, ಮೊಳಕಾಲ್ಮೂರು ತಾಲೂಕಿನ ಎದ್ದಲ್ಲಬೋಮ್ಮನಹಟ್ಟಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಂದ್ರಶೇಖರ ಕಂಬಾಳಿಮಠ್ ಮಾತನಾಡಿ, ಹಕ್ಕಿಜ್ವರ ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗವಲ್ಲ. ಈ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕೋಳಿ ಶೀತ ಜ್ವರ, ಹಕ್ಕಿಜ್ವರದ ಮುಂಜಾಗ್ರತಾ ಕ್ರಮಗಳ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ. ಕಾಳಿಸಿಂಗೆ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಮತ್ತಿತರರು ಇದ್ದರು.

ಸಹಾಯವಾಣಿ 1962

ಜಿಲ್ಲೆಯ ಜಾನುವಾರು ಸಾಕಾಣಿಕೆದಾರರು ಸಂಚಾರಿ ಪಶು ಚಿಕಿತ್ಸಾ ಘಟಕಗಳ ಸದುಪಯೋಗ ಪಡೆಯಬೇಕು ಎಂದು ಎಡಿಸಿ ಹೇಳಿದರು. ಚಳ್ಳಕೆರೆ ತಾಲೂಕಿನಲ್ಲಿ-2, ಹಿರಿಯೂರು-2, ಹೊಸದುರ್ಗ-2, ಚಿತ್ರದುರ್ಗ-1, ಹೊಳಲ್ಕೆರೆ-1 ಹಾಗೂ ಹೊಸದುರ್ಗ ತಾಲೂಕಿನಲ್ಲಿ 1 ಸೇರಿ ಜಿಲ್ಲೆಯಲ್ಲಿ 9 ವಾಹನಗಳಿವೆ. ರೈತರು, ಜಾನುವಾರು ಮಾಲೀಕರು ಪ್ರಾಣಿಗಳ ಚಿಕಿತ್ಸೆಗೆ ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆ ಮಾಡಬಹುದು.

ಸಹಾಯವಾಣಿಗೆ ಕರೆ ಮಾಡಿದರೆ ಕೂಡಲೇ ಸ್ಪಂದಿಸುವುದಿಲ್ಲವೆಂಬ ದೂರುಗಳು ಬರಬಾರದೆಂದು ಅಧಿಕಾರಿಗಳನ್ನು ಎಡಿಸಿ ಎಚ್ಚರಿಸಿದರು. ಸಂಚಾರಿ ಪಶು ಚಿಕಿತ್ಸಾ ವಾಹನಗಳಲ್ಲಿ ಪಶುವೈದ್ಯರು, ಸಹಾಯಕರು ಇರುತ್ತಾರೆ. ಸಂಚಾರಿ ಘಟಕಗಳು ಭಾನುವಾರದಂದೂ ಕಾರ್ಯ ನಿರ್ವಹಿಸುತ್ತವೆ ಎಂದು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net