ಬೇಡ ಜಂಗಮರಿಗೆ ಎಸ್​ಸಿ ಪ್ರಮಾಣ ಪತ್ರ ನೀಡಿ

10byd2
Published on

ಬ್ಯಾಡಗಿ: ಸಂವಿಧಾನಬದ್ಧ ಹಾಗೂ ಸವೋಚ್ಚ ನ್ಯಾಯಾಲಯದ ಆದೇಶವಿದ್ದರೂ ರಾಜ್ಯದ ಪರಿಶಿಷ್ಟ ಜಾತಿಯ ಬೇಡ ಜಂಗಮರಿಗೆ ನ್ಯಾಯ ಸಿಗುತ್ತಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ನಮ್ಮ ಹಕ್ಕುಗಳನ್ನು ಕೊಡಿಸುವ ಬಗ್ಗೆ ರ್ಚಚಿಸಬೇಕು ಎಂದು ಒತ್ತಾಯಿಸಿ ಬೇಡ ಜಂಗಮ ಸಮಾಜದವರು ಮೋಟೆಬೆನ್ನೂರಿನಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಬೇಡಜಂಗಮ ಸಮಾಜದ ತಾಲೂಕಾಧ್ಯಕ್ಷ ಶಂಭುಲಿಂಗಯ್ಯ ಮುದೇನೂರುಮಠ ಮಾತನಾಡಿ, ಕೆಲ ಶಾಸಕರ ಒತ್ತಡದಿಂದ ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣ ವಿತರಿಸುವಲ್ಲಿ ವಿಳಂಬವಾಗಿದೆ. ಕೆ.ಪಿ. ಸಿಂಗ್ ಅಂತ್ರೋಪಾಲಜಿ, ಬೇಡಜಂಗಮ ಗೆಜೆಟ್ ಆದೇಶದ ಸೂರ್ಯನಾಥ ಕಾಮತ್ ವರದಿ, 1995ರ ಸವೋಚ್ಚ ನ್ಯಾಯಾಲಯದ ಗೀತಾ ಕುಲಕರ್ಣಿ ಪ್ರಕರಣ ಹಾಗೂ 2008, 2014 ಹಾಗೂ 2021ರಲ್ಲಿಯೂ ಉಚ್ಚ ನ್ಯಾಯಾಲಯ ತೀರ್ಪು ಸೇರಿ ವಿವಿಧ ಜಿಲ್ಲಾಧಿಕಾರಿಗಳ ಆದೇಶಗಳಲ್ಲಿ ಸ್ಪಷ್ಟವಾಗಿ ವೀರಶೈವ ಜಂಗಮರೇ ಬೇಡಜಂಗಮರು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಕೆಲವರ ಕುತಂತ್ರದಿಂದ ನಮಗೆ ಜಾತಿ ಪ್ರಮಾಣ ಪತ್ರ ಪಡೆಯಲು ತೊಂದರೆ ಉಂಟಾಗಿದೆ ಎಂದು ದೂರಿದರು.

ಹಿರಿಯ ವಕೀಲ ಹಾಗೂ ಬೇಡಜಂಗಮ ಸಮಾಜದ ಒಕ್ಕೂಟದ ಅಧ್ಯಕ್ಷ ಬಿ.ಡಿ. ಹಿರೇಮಠ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ 68 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಜಂಗಮರಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರದ ನಡೆಯಿಂದ ಮಠಾಧೀಶರು ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ವಣವಾಗಿದೆ ಎಂದರು.

ಬೇಡ ಜಂಗಮರು ಪರಿಶಿಷ್ಟ ಜಾತಿಯಲ್ಲಿದ್ದು, ನ್ಯಾಯಾಲಯ ಆದೇಶ, ಗೆಜೆಟ್ ವರದಿ ಆಧರಿಸಿ ಜಾತಿ ಪ್ರಮಾಣ ಪತ್ರ ನೀಡಲು ಜು. 1ರಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡುವುದಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಹಿಂದೆ ಮಠಾಧೀಶರ ಸಮ್ಮುಖದಲ್ಲಿ ವಾಗ್ದಾನ ಮಾಡಿದ್ದರು. 68 ದಿನ ಗತಿಸಿದರೂ ಅವರ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ ಎಂದರು. ಚನ್ನಬಸಯ್ಯ ಪ್ಯಾಟಿಮಠ, ಕೆ.ಸಿ. ಸೊಪ್ಪಿನಮಠ, ವಿ.ಎಂ. ಹನಗೋಡಿಮಠ, ಮಂಜುನಾಥ ಹಿರೇಮಠ, ಬಾವಲಿಂಗಯ್ಯ ಹಿರೇಮಠ, ಪ್ರದೀಪ ನಂದಿಕೇಶ್ವರಮಠ, ಬಸಯ್ಯ ಹಿರೇಮಠ, ವೀರಯ್ಯ ಹಿರೇಮಠ, ಶೇಖಯ್ಯ ಕಾರಿಕಂಠಿಮಠ, ಪ್ರಕಾಶ ಹನುಮನಹಳ್ಳಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net