ಗೋಣಿಕೊಪ್ಪ: ಕೊಡವ ತಿಂಗಳ ಹೊಸ ವರ್ಷಾಚರಣೆ ಕೂಡ ಕೃಷಿ ಮೂಲದ ಹಿನ್ನೆಲೆ ಹೊಂದಿದೆ. ಗದ್ದೆ, ನೇಂಗಿ (ನೇಗಿಲು), ನೊಗ, ಎತ್ತುಗಳಿಗೆ ಪೂಜೆ ಸಲ್ಲಿಸುವ ವೈಶಿಷ್ಟೃ ಹೊಂದಿದೆ ಎಂದು ಬೇಗೂರು ಗ್ರಾಮದ ಕೃಷಿಕ ಕೊಟ್ಟಂಗಡ ಸುಬ್ಬಯ್ಯ ಹೇಳಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಮ್ಮ ದೇಶ ನಮ್ಮ ಸಂಸ್ಕೃತಿ ಕಾರ್ಯಕ್ರಮದಡಿ ಬೇಗೂರು ಗ್ರಾಮದ ಕೋಳೇರ ನಿತೇಶ್ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಎಡಮ್ಯಾರ್ ಒಂದ್ ಆಚರಣೆಯಲ್ಲಿ ಹಬ್ಬದ ಆಚರಣೆ ಬಗ್ಗೆ ಮಾಹಿತಿ ನೀಡಿದರು. ಕೃಷಿ ಮೂಲದೊಂದಿಗೆ ಹೊಸ ವರ್ಷ ಎಡಮ್ಯಾರ್ ಒಂದ್ ಆಚರಣೆಗೆ ಪೂರ್ವಿಕರೇ ನಿಯಮ ಪಾಲಿಸಿರುವುದು ಖುಷಿಯ ವಿಚಾರ. ಮನೆಯಲ್ಲಿ ದೀಪ ಬೆಳಗಿಸಿ, ಗದ್ದೆಯಲ್ಲಿ ಎತ್ತು, ಕೋಣ ಕಟ್ಟಿಕೊಂಡು ಉಳುಮೆ ಆರಂಭಿಸುವ ಹಿನ್ನೆಲೆ ಇದೆ. ಕೊಡವರ ವಿಭಿನ್ನ ಸಂಸ್ಕೃತಿ, ಆಚಾರ ವಿಚಾರ ಹೊಂದಿರುವ ಆಚರಣೆಯಲ್ಲಿ ಕೃಷಿ ಚಟುವಟಿಕೆಗೆ ಚಾಲನೆ ನೀಡುವ ಹಬ್ಬವಾಗಿದೆ ಎಂದು ಹೇಳಿದರು.
ಎಡಮ್ಯಾರ್ ಒಂದ್ ಆಚರಣೆ ನಂತರ ಕೈಲ್‌ಪೊಳ್ದ್, ಕಾವೇರಿ ಚಂಗ್ರಾಂದಿ, ಪುತ್ತರಿ ಆಚರಣೆ ಕೂಡ ಗದ್ದೆಯಲ್ಲಿ ಬೆಳೆಯುವ ಭತ್ತ ಕೃಷಿಯ ಮೂಲ ಹೊಂದಿದೆ. ಕೃಷಿಗೆ ನಮ್ಮಲ್ಲಿರುವ ಆಸಕ್ತಿ, ಹಬ್ಬವಾಗಿ ಆಚರಿಸಲಾಗುತ್ತಿದೆ. ವಿಶಿಷ್ಟ ಆಚರಣೆ ನಮ್ಮದು. ಮುಂಜಾನೆ ಎತ್ತುಗಳ ಕಾಲುಗಳನ್ನು ತೊಳೆದು ಪೂಜೆ ಸಲ್ಲಿಸಲಾಗುತ್ತದೆ. ಉಳುಮೆಗೆ ಬಳಸುವ ನೇಂಗಿ (ನೇಗಿಲು), ನೊಗ ಇವುಗಳನ್ನು ತೊಳೆದು ಪೂಜೆ ಸಲ್ಲಿಸಿ, ನಂತರ ಮನೆಯ ಬಾಡೆಯಲ್ಲಿರುವ (ಮನೆಯ ಮುಖ್ಯ ಕೋಣೆ) ನೆಲ್ಲಿಕ್ಕಿಯಲ್ಲಿ (ದೇವರನ್ನು ಪೂಜಿಸುವ ಸ್ಥಳ) ವರುಣ ದೇವರನ್ನು ಉತ್ತಮ ಮಳೆಯಾಗಲಿ ಎಂದು, ದೇವರ ಕೃಪೆಯಿಂದ ಕೃಷಿಗೆ ಕಾಡುಪ್ರಾಣಿಗಳು ಸೇರಿದಂತೆ ಯಾವುದೇ ರೀತಿಯ ತೊಂದರೆಯಾಗದಿರಲಿ ಎಂದು ಮನೆಯ ಯಜಮಾನ ದೇವರನ್ನು ನೆನೆದು ದೇವರಿಗೆ ಅಕ್ಕಿ ಹಾಕಿ ಬೇಡಿಕೊಳ್ಳುತ್ತಾರೆ. ಉಳುಮೆ ಮಾಡಿ ಶಾಸ್ತ್ರ ಮಾಡುತ್ತಾರೆ ಎಂದು ಆಚರಣೆ ಕುರಿತು ಮಾಹಿತಿ ನೀಡಿದರು.
ನಂತರ ಮನೆಯಲ್ಲಿ ದೀಪ ಬೆಳಗಿಸಿ ದೇವರನ್ನು ಪ್ರಾರ್ಥಿಸಿ ಅಕ್ಕಿ ಹಾಕಲಾಯಿತು. ಗದ್ದೆಯಲ್ಲಿ ಗದ್ದೆ ಮತ್ತು ನೇಂಗಿ, ನೊಗಕ್ಕೆ ಹೂವಿಟ್ಟು ಪೂಜೆ ಸಲ್ಲಿಸಲಾಯಿತು. ಈಡುಕಾಯಿ ಇಟ್ಟು ಮಳೆ, ಬೆಳೆಗೆ ಪ್ರಾರ್ಥಿಸಲಾಯಿತು. ಕೃಷಿಕರಾದ ಕೋಳೇರ ನಿತೇಶ್, ಮಲ್ಲಂಡ ರಾಜಾ ಸುಬ್ಬಯ್ಯ, ಕಾಯಪಂಡ ಕಂಟಿ ಕರುಂಬಯ್ಯ, ಕೋಳೇರ ಸೋಮಯ್ಯ, ಕೋಳೇರ ಗಣಪತಿ, ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯಕ್ರಮ ಸಂಚಾಲಕ ಮಂಡೇಡ ಅಶೋಕ್, ಎನ್.ಎನ್.ದಿನೇಶ್, ಖಜಾಂಚಿ ವಿ.ವಿ.ಅರುಣ್‌ಕುಮಾರ್, ನಿರ್ದೇಶಕ ಎಂ.ಎಂ. ಚನ್ನನಾಯಕ, ಸದಸ್ಯ ಚೆಪ್ಪುಡೀರ ರೋಶನ್ ಇದ್ದರು.