

ಮೈಸೂರು: ಮೂಲಸೌಕರ್ಯ ಕೊರತೆ ಇರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮನಸೋಇಚ್ಛೆ ಸೀಟ್‌ಗಳ ಹೆಚ್ಚಳಕ್ಕೆ ಕಡಿವಾಣ ಹಾಕಲು ಕ್ರಾಫರ್ಡ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಬಿ.ಕಾಂ. ಕೋರ್ಸ್‌ನ ಪ್ರಥಮ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯಾಮಿತಿಯನ್ನು 690ರಿಂದ 1,100ಕ್ಕೆ ಹೆಚ್ಚಳಕ್ಕೆ ವಿಷಯ ಮಂಡಿಸಲಾಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಈ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ತಕ್ಕಷ್ಟು ಶೌಚಗೃಹ, ವಿಶ್ರಾಂತಿ ಕೊಠಡಿ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳಿಲ್ಲ.
ಸರ್ಕಾರಿ ಕಾಲೇಜು ಎಂಬ ಕಾರಣಕ್ಕೆ ಬೇಕಾಬಿಟ್ಟಿಯಾಗಿ ಸೀಟ್ ಹೆಚ್ಚಳ ಮಾಡುವುದು ಸರಿಯಲ್ಲ. ಇದರಿಂದ ವಿದ್ಯಾರ್ಥಿನಿಯರಿಗೂ ತೊಂದರೆಯಾಗಲಿದೆ. ಇದಕ್ಕೆ ಸರ್ಕಾರವನ್ನು ಅಲ್ಲ, ವಿವಿಯನ್ನೇ ಹೊಣೆ ಮಾಡಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಯಂತ್ರಣ ಹೇರುವುದು ಅಗತ್ಯ: ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸಮಸ್ಯೆಯಾದರೆ ಸರ್ಕಾರಕ್ಕೆ ಪತ್ರ ಬರೆಯುವುದಿಲ್ಲ. ನೇರವಾಗಿ ಯುಜಿಸಿಗೆ ಪತ್ರ ಬರೆಯುತ್ತಾರೆ. ಆಗ ವಿವಿಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ, ಮಹಾರಾಣಿ ಕಾಲೇಜು ಅಷ್ಟೇ ಅಲ್ಲ, ಎಲ್ಲ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮನಸೋಇಚ್ಛೆ ಸೀಟ್ ಹೆಚ್ಚಳಕ್ಕೆ ನಿಯಂತ್ರಣ ಹೇರುವುದು ಅಗತ್ಯ ಇದೆ ಎಂದು ಕುಲಪತಿಗಳು ಹೇಳಿದರು.
ಕಳೆದ ಲೋಕಸಭಾ ಚುನಾವಣೆಗೆ ಮಹಾರಾಣಿ ವಾಣಿಜ್ಯ ಕಾಲೇಜು ಬಳಕೆ ಮಾಡಿಕೊಂಡಿದ್ದರಿಂದ ಇಡೀ ವಿವಿ ಪರೀಕ್ಷೆಗಳನ್ನು 10 ದಿನ ಮುಂದೂಡಬೇಕಾಯಿತು. ಈ ರೀತಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕಾಗಿದೆ ಎಂದು ಕುಲಪತಿ ಲೋಕನಾಥ್ ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ. ವಿಜಯ ಲಕ್ಷ್ಮೀ, ಮಹಾರಾಣಿ ಕಾಲೇಜುಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಸೀಟು ಹೆಚ್ಚಳಕ್ಕೆ ಬೇರೆ ಪದವಿ ಕಾಲೇಜುಗಳಿಂದ ವಿರೋಧ ಇದೆ. ಈ ಕ್ರಮದಿಂದ ಉಳಿದ ಕಾಲೇಜುಗಳಲ್ಲಿ ದಾಖಲಾತಿ ಕಡಿಮೆ ಆಗಲಿದೆ. ಆದ್ದರಿಂದ ಒಂದೇ ಕಾಲೇಜಿನ ಸೀಟ್‌ಗಳ ಹೆಚ್ಚಳ ಕ್ರಮ ಕೈಬಿಡಬೇಕು. ಇದರಿಂದ ಇತರ ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ದೊರೆಯಲಿದೆ ಎಂದು ಹೇಳಿದರು. ಈ ಕುರಿತು ಚರ್ಚೆಯ ಬಳಿಕ ಸರ್ಕಾರಿ ಪದವಿ ಕಾಲೇಜುಗಳ ಸೀಟ್‌ಗಳ ಹೆಚ್ಚಳ ಮಿತಿಯನ್ನು ಶೇ.10ರಿಂದ 15ಕ್ಕೆ ಮಿತಿಗೊಳಿಸಲು ಸಭೆ ತೀರ್ಮಾನಿಸಿತು.
ಮಹಾರಾಣಿ ವಾಣಿಜ್ಯ ಕಾಲೇಜಿನ ಬಿ.ಕಾಂ.ಕೋರ್ಸ್‌ನ ಪ್ರಥಮ ವರ್ಷಕ್ಕೆ ಹಾಲಿ ಶಾಶ್ವತ ಸಂಯೋಜನೆ 240, ತಾತ್ಕಾಲಿಕ ಸಂಯೋಜನೆ 450 ಸೀಟ್‌ಗಳಿಗೆ ನಿಗದಿ ಪಡಿಸಲಾಗಿದೆ. 2024-25ನೇ ಸಾಲಿನಲ್ಲಿ 410 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರವೇಶಾತಿ ಮಾಡಿಕೊಳ್ಳಲಾಗಿದೆ. ಇದರಿಂದಾಗಿ 1,100 ವಿದ್ಯಾರ್ಥಿಗಳ ಪ್ರವೇಶಾತಿಯಾಗಿದೆ. ಹೆಚ್ಚುವರಿ ಪ್ರವೇಶಾತಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅನುಮೋದನೆ ನೀಡಲಾಯಿತು. ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿ ಆಧರಿಸಿ ಸರ್ಕಾರದ ಹೊರಡಿಸಿರುವ ಆದೇಶದ ಪ್ರಕಾರ ಪರಿಸರ ಅಧ್ಯಯನ ವಿಷಯದ ಪಠ್ಯಕ್ರಮಕ್ಕೆ ಅನುಮೋದನೆ ನೀಡಲಾಯಿತು.
ಕುವೈತ್‌ನ ಯೂನಿವರ್ಸಲ್ ಇನ್ಸ್‌ಟಿಟ್ಯೂಟ್ ಫಾರ್ ಪ್ರೈವೇಟ್ ಟ್ರೈನಿಂಗ್ ಸಂಸ್ಥೆಗೆ ವಿಶೇಷ ಕಾರ್ಯಕ್ರಮದಡಿ ಬಿ.ಎ(ಇಂಗ್ಲಿಷ್ ಸಾಹಿತ್ಯ ಮತ್ತು ಡಿಜಿಟಲ್ ಮಿಡಿಯಾ ಕಮ್ಯೂನಿಕೇಷನ್), ಮನೋಶಾಸ್ತ್ರ, ಬಿ.ಸಿ.ಎ.( ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್) ಕೋರ್ಸ್‌ಗಳಿಗೆ ವಿವಿಯಿಂದ ಮಾನ್ಯತೆ ನೀಡಿದ್ದು, ಈ ಕೋರ್ಸ್‌ಗಳ ಪ್ರಥಮ ವರ್ಷದ ಪಠ್ಯಕ್ರಮ, ಪರಿನಿಯಮಗಳಿಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಅಂತೆಯೇ ಹೆಬ್ಬಾಳದಲ್ಲಿರುವ ಸಿಪೆಟ್ ಕಾಲೇಜಿನ, ವಿದ್ಯಾರಣ್ಯಪುರಂನ ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಫಾರ್ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ ಆ್ಯಂಡ್ ರಿಸರ್ಚ್ ಸೆಂಟರ್, ಹೂಟಗಳ್ಳಿಯ ಗೆಟ್ಸ್ ಅಕಾಡೆಮಿ, ಕಾವೇರಿ ಕಾಲೇಜ್ ಆಫ್ ಲೈಫ್ ಸೈನ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್, ಮದ್ದೂರು ತಾಲೂಕಿನ ಕೊಪ್ಪದಲ್ಲಿರುವ ವೋಗ್ ಇನ್ಸ್‌ಟಿಟ್ಯೂಟ್ ಆಫ್ ಡಿಸೈನ್ ಕಾಲೇಜಿನಲ್ಲಿ ಪ್ರಾರಂಭಿಸಿರುವ ವಿಶೇಷ ಕೋರ್ಸ್‌ಗಳಿಗೂ ಒಪ್ಪಿಗೆ ನೀಡಲಾಯಿತು.
ಎಂ.ಎಸ್ಸಿ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ಪರೀಕ್ಷೆಯಲ್ಲಿ ಪೌಷ್ಟಿಕಾಂಶ ಜೀವರಾಸಾಯನಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ನೀಡಲು ಹಿರಿಯ ಪ್ರಾಧ್ಯಾಪಕಿ ಅಸ್ನಾ ಉರೂಜ್ ಹೆಸರಿನಲ್ಲಿ ದತ್ತಿ ನಗದು ಬಹುಮಾನ, ಎಂ.ಎಸ್ಸಿ ಪರೀಕ್ಷೆಯಲ್ಲಿ ‘ಭೌಗೋಳಿಕ ಮಾಹಿತಿ ವ್ಯವಸ್ಥೆ’ ವಿಷಯದಲ್ಲಿ ಹೆಚ್ಚು ಅಂಕ ಪಡೆದವರಿಗೆ ಕೊಡಲು ಜಯಶ್ರೀ ರಾಮ್ ಚಿನ್ನದ ಪದಕ ದತ್ತಿ ಸ್ಥಾಪನೆಗೆ ಸಭೆ ಸಮ್ಮತಿ ನೀಡಿತು. 2023-24ನೇ ಸಾಲಿನ ವಾರ್ಷಿಕ ವರದಿಗೆ ಅನುಮೋದನೆ ನೀಡಲಾಯಿತು. ಜತೆಗೆ, 2020-21 ಮತ್ತು 2021-22ನೇ ಸಾಲಿನ ವಾರ್ಷಿಕ ಲೆಕ್ಕಪರಿಶೋಧನಾ ವರದಿಯ ಆಕ್ಷೇಪಣೆಗಳಿಗೆ ಸಿದ್ಧಪಡಿಸಿರುವ ಅನುಪಾಲನಾ ವರದಿಗೂ ಸಮ್ಮತಿ ದೊರಕಿತು.
ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಸೆಮಿಸ್ಟರ್ ವೇಳಾಪಟ್ಟಿಯನ್ನು ಹಿಂದಕ್ಕೆ-ಮುಂದಕ್ಕೆ ಹಾಕುವ ಪದ್ಧತಿಯನ್ನು ಕೈಬಿಡಲಾಗುವುದು. ಸಕಾಲಕ್ಕೆ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು. ಬಿ.ಎ., ಬಿ.ಕಾಂ., ಬಿ.ಎಸ್ಸಿ ಕೋರ್ಸ್‌ಗಳ ಪ್ರವೇಶಾತಿ ವೇಳಾಪಟ್ಟಿ ಇನ್ನು 2-3 ದಿನಗಳಲ್ಲಿ ಅಂತಿಮವಾಗಲಿದೆ. ಪ್ರೊ.ಎನ್.ಕೆ.ಲೋಕನಾಥ್ ಕುಲಪತಿ, ಮೈವಿವಿ