

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಜನ್ನತನಗರ ನಿವಾಸಿಗಳಿಗೆ ಎಲ್ ಆ್ಯಂಡ್ ಟಿ ಕಂಪನಿಯಿಂದ ಬೇಕಾಬಿಟ್ಟಿ ನೀರಿನ ಬಿಲ್ ವಿತರಿಸುತ್ತಿರುವುದನ್ನು ಖಂಡಿಸಿ ಸಮಗ್ರ ಪ್ರಜೆಗಳ ಧ್ವನಿ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಜನ್ನತನಗರ ಕೊಳಚೆ ಪ್ರದೇಶವಾಗಿದ್ದು, ಮೂಲ ಸೌಕರ್ಯ ವಂಚಿತವಾಗಿದೆ. ಈ ಮಧ್ಯೆ ಎಲ್ ಆ್ಯಂಡ್ ಟಿ ಕಂಪನಿಂದ ನೀರು ಸರಬರಾಜು ಆದಾಗಿನಿಂದ ಬೇಕಾಬಿಟ್ಟಿ ನೀರಿನ ಬಿಲ್ ನೀಡಲಾಗುತ್ತಿದೆ. ಕಡು ಬಡವರು ವಾಸಿಸುತ್ತಿರುವ ಈ ಪ್ರದೇಶದ ಕೆಲವರಿಗೆ 60,000, 80,000 ರೂ.ವರೆಗೆ ನೀರಿನ ಬಿಲ್ ನೀಡಲಾಗಿದೆ. ಇದು ಜನಪ್ರತಿನಿಧಿಗಳ ಮತ್ತು ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೊಳಚೆ ಪ್ರದೇಶದ ನಿವಾಸಿಗಳಿಗೆ ಸರ್ಕಾರದ ಆಶ್ರಯ ಯೋಜನೆಯಡಿ ಮನೆಗಳು ಹಂಚಿಕೆಯಾಗಿಲ್ಲ. ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡದೆ ಕಡು ಬಡವರಿಗೆ ಅನ್ಯಾಯ ಎಸಗಲಾಗಿದೆ. ಇಲ್ಲಿನ ಬಹುತೇಕ ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಆಶ್ರಯ ಮನೆಗಳು ಮರೀಚಿಕೆಯಾಗಿವೆ. ಸರ್ಕಾರದಿಂದ ನಿರ್ಮಿಸಲಾದ ಜಿ+2 ಹಾಗೂ ಇತರೆ ಆಶ್ರಯ ಯೋಜನೆಗಳ ವಸತಿಗಳು ಕಳಪೆ ಗುಣಮಟ್ಟದ್ದಾಗಿವೆ. ಇವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು. ಕೊಳಚೆ ಪ್ರದೇಶ ಎಂದು ಪರಿಗಣಿಸಿ ತೆರಿಗೆಯನ್ನು ಕಡಿಮೆ ಮಾಡಬೇಕು. ಕೊಳಚೆ ಪ್ರದೇಶದಲ್ಲಿ ನಿರ್ಮಾಣವಾದ ಮನೆಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಜೆಗಳ ಧ್ವನಿ ಸಮಿತಿ ಅಧ್ಯಕ್ಷ ಅಶೋಕ ಭಂಡಾರಿ, ಪಾರ್ವತಿ ಹಿತ್ತಲಮನಿ, ವಿನಿತಾ ಕದಂ. ಭಾಷಾ ಬಳ್ಳಾರಿ, ಚಿದಾನಂದ ಹರಿಹರ, ಇತರರಿದ್ದರು.