

ಸಾಗರ: ಕುಕ್ಕುಟೋದ್ಯಮ ತೀವ್ರ ಸಂಕಷ್ಟದಲ್ಲಿದ್ದು ದೊಡ್ಡ ಕಂಪನಿಗಳು ಸಣ್ಣ-ಪುಟ್ಟ ಕೋಳಿ ಸಾಕಣೆದಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿವೆ. ಇದನ್ನು ವಿರೋಧಿಸಿ ಫೆ.28ರಂದು ಜಿಲ್ಲಾದ್ಯಂತ ಇರುವ ಕೋಳಿ ಸಾಕಣೆದಾರರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಕೋಳಿ ಸಾಕಣೆದಾರರಾದ ರಾಧಾ ಪ್ರಕಾಶ್ ತಿಳಿಸಿದರು.
ಕೃಷಿ ವಲಯದಲ್ಲಿ ಕುಕ್ಕುಟೋದ್ಯಮವೂ ಒಂದು ವಿಭಾಗವಾಗಿದ್ದು, ನಿರುದ್ಯೋಗಿಗಳು, ಯುವಜನರು ಕೋಳಿ ಸಾಕಣೆ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಬಂಡವಾಳಶಾಹಿ ಕಂಪನಿಗಳು ಸಣ್ಣ ಕೋಳಿ ಸಾಕಣೆದಾರರನ್ನು ದರ ವ್ಯತ್ಯಾಸ ಮತ್ತು ಶೋಷಣೆ ಮೂಲಕ ಹತ್ತಿಕ್ಕಲು ಮುಂದಾಗಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೋಳಿ ಖರೀದಿ ಮಾಡುತ್ತಿರುವ ಕೆಲವು ಕಂಪನಿಗಳು ಕೋಟ್ಯಂತರ ರೂ. ಬಂಡವಾಳ ಹೂಡಿ ಬೇಕಾಬಿಟ್ಟಿ ದರಕ್ಕೆ ಕೋಳಿ ಖರೀದಿ ಮಾಡಿ ನಮ್ಮಂತಹ ಸಣ್ಣ ಉದ್ಯಮಿಗಳಿಗೆ ನಷ್ಟ ಉಂಟು ಮಾಡುತ್ತಿವೆ. ಮರಿ ಖರೀದಿ ಮಾಡಿ ಅದನ್ನು 45 ದಿನಗಳ ಕಾಲ ಆಹಾರ, ಸೂಕ್ತ ಔಷಧಗಳನ್ನು ನೀಡಿ ಸಾಕುತ್ತೇವೆ. ಗೊಬ್ಬರ ತೆಗೆಯುತ್ತೇವೆ. ಏನೂ ಶ್ರಮಪಡದ ಕಂಪನಿಗಳು ಅತಿ ಕಡಿಮೆ ದರಕ್ಕೆ ಕೋಳಿ ಖರೀದಿಸಿ ಅದನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಿ ದೊಡ್ಡ ಲಾಭ ಗಳಿಸುತ್ತಿವೆ. ಒಂದರ್ಥದಲ್ಲಿ ಕುಕ್ಕುಟೋದ್ಯಮವನ್ನು ಮಾಫಿಯಾ ರೀತಿಯಲ್ಲಿ ಬೆಳೆಸುವ ಪ್ರಯತ್ನ ಬಂಡವಾಳಶಾಹಿ ಕಂಪನಿಗಳು ನಡೆಸುತ್ತಿದ್ದು ಶಾಸಕರು ಸಣ್ಣಪುಟ್ಟ ಕುಕ್ಕುಟೋದ್ಯಮ ನಡೆಸುವವರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಪ್ರಕಾಶ್ ತಾಳಗುಪ್ಪ ಮಾತನಾಡಿ, ಕಳೆದ 10 ವರ್ಷಗಳಿಂದ ನಾವು ಕೋಳಿ ಸಾಕಣೆ ಮಾಡುತ್ತಿದ್ದೇವೆ. ಕಂಪನಿಗಳು ನಮ್ಮನ್ನು ಶೋಷಣೆ ಮಾಡುತ್ತಿವೆ. ದರ ನಿಗದಿಯಲ್ಲಿ ಸಹ ತಾರತಮ್ಯ ಮಾಡುತ್ತಿದ್ದು ಬಹುತೇಕ ಕೋಳಿ ಸಾಕಣೆದಾರರು ನಷ್ಟ ಅನುಭವಿಸಿ ಉದ್ಯಮವನ್ನೆ ಮುಚ್ಚಿ ಬೀದಿಗೆ ಬಂದಿದ್ದಾರೆ. ಸಣ್ಣ ಮರಿಯಿಂದ ಅದನ್ನು ದೊಡ್ಡದು ಮಾಡುವ ನಮಗೆ ಕೋಳಿಯನ್ನು ಮಾರಾಟ ಮಾಡುವ ಸ್ವಾತಂತ್ರ್ಯ ವಿಲ್ಲ. ಅವರು ನಿಗದಿಪಡಿಸಿದ ದರಕ್ಕೆ ಕೋಳಿ ಮಾರಾಟ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಕುಕ್ಕುಟೋದ್ಯಮ ಕೃಷಿಯ ಒಂದು ಭಾಗ ಎಂದು ಹೇಳುತ್ತಿವೆ. ಆದರೆ ಸಣ್ಣ ಕೋಳಿ ಸಾಕಣೆದಾರರ ನೆರವಿಗೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.