ಬೇಕರಿಗೆ ಲಾರಿ ನುಗ್ಗಿ ಮೂವರ ದುರ್ಮರಣ

Published on

ಕೊರಟಗೆರೆಯ ಕೋಳಾಲದಲ್ಲಿ ಟನೆ ಅವಡಕ್ಕೆ ಬ್ರೇಕ್​ ಫೇಲ್ಯೂರ್​ ಕಾರಣ

ಕೊರಟಗೆರೆ: ಗೊಬ್ಬರ ತುಂಬಿದ್ದ ಲಾರಿಯೊಂದು ಬ್ರೇಕ್​ ಫೇಲ್ಯೂರ್​ ಆಗಿ ಬೇಕರಿ ಹಾಗೂ ಬ್ಯಾಂಗಲ್ಸ್​ ಸ್ಟೋರ್ಸ್​ಗೆ ನುಗ್ಗಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.

ತಾಲೂಕಿನ ಕಾಟೇನಹಳ್ಳಿ ರಂಗಶಾಮಯ್ಯ(70), ಪುರದಳ್ಳಿ ಬೈಲಪ್ಪ(65), ಸುಂಕದಹಳ್ಳಿ ಜಯಣ್ಣ(55) ಮೃತರು. ತಾಲೂಕಿನ ಹೊಸಪೇಟೆಯ ತಾಪಂ ಮಾಜಿ ಅಧ್ಯಕ್ಷೆ ಸಿದ್ದಗಂಗಮ್ಮ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹಿನಗೊಂಡಿದ್ದು, ತೀವ್ರನಿಗಾಘಟದಲ್ಲಿ ಇರಿಸಲಾಗಿದೆ. ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಕರಿ ಮಾಲೀಕ ಅದೃಷ್ಟವಶಾತ್​ ಅನಾಹುತದಿಂದ ಪಾರಾಗಿದ್ದು, ಹಿಂದೆಯೂ ಇದೇ ರೀತಿ ಇದೇ ಜಾಗದಲ್ಲಿ ಇಂಥದೇ ಘಟನೆ ಸಂಭವಿಸಿದ ಉದಾಹರಣೆ ಇದೆ.

ತಾಲೂಕಿನ ಕೋಳಾಲದಲ್ಲಿ ಮಂಗಳವಾರ ಬೆಳಗ್ಗೆ 11.30ರ ಸುಮಾರಿಗೆ ಕೋಳಾಲ ಪೊಲೀಸ್​ ಠಾಣೆ ರಸ್ತೆ ಕಡೆಯಿಂದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬೈರವೇಶ್ವರ ಕಾಂಡಿಮೆಂಟ್ಸ್​ ಹಾಗೂ ಬೇಕರಿಗೆ ನುಗ್ಗಿದೆ. ಈ ವೇಳೆ ಅಂಗಡಿಯಲ್ಲಿ ಖರೀದಿ ಮಾಡುತ್ತಿದ್ದವರ ಮೇಲೆ ಲಾರಿ ಹರಿದಿದೆ.

ತನಿಖೆ ನಡೆಸಲು ಸೂಚನೆ: ದುರಂತದ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ ಅಧಿಕಾರಿಗಳಿಂದ ಮಾಹಿತಿ ಪಡೆದು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಪಘಾತ ಸಂಬಂಧ ಹೆಚ್ಚಿನ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ಕೊರಟಗೆರೆ ತಾಲೂಕು ಕೋಳಾಲದಲ್ಲಿ ಗೊಬ್ಬರ ತುಂಬಿದ್ದ ಲಾರಿ ಅಂಗಡಿಗೆ ನುಗ್ಗಿದ ಪರಿಣಾಮ ಸಂಭವಿಸಿದ ದುರ್ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.| ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವಕೋಳಾಲ ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ರಸ್ತೆ ನಿರ್ಮಾಣ ಮಾಡಬೇಕು. ಮೃತರ ಕುಟುಂಬಕ್ಕೆ ಸರ್ಕಾರ ಸೂಕ್ತ ರೀತಿಯ ಪರಿಹಾರ ಕಲ್ಪಿಸಬೇಕು.|ಡಾ.ಹನುಮಂತನಾಥ ಸ್ವಾಮೀಜಿ ಕುಂಚಿಟಿಗ ಸಂಸ್ಥಾನ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net