

ನಾಗಮಂಗಲ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕಾವೇರಿ ಬೇಕರಿಯಿಂದ ತಂದಿದ್ದ ಕೇಕ್ ತಿಂದು ಮಗು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪಾಲಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ಬೇಕರಿಗೆ ಬೀಗ ಹಾಕಿದ್ದಾರೆ.
ಪಟ್ಟಣದ ವಾಸಿ ಆನಂದ್ ಎಂಬುವರು ಭಾನುವಾರ ಸಂಜೆ ಕಾವೇರಿ ಬೇಕರಿಯಲ್ಲಿ ಐಸ್ ಕೇಕ್ ತಂದು ಮಗುವಿಗೆ ತಿನ್ನಿಸಿದ್ದರು. ಕೇಕ್ ತಿಂದ ಕೆಲವೇ ಕ್ಷಣದಲ್ಲಿ ಮಗು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಮಗುವನ್ನು ಪರೀಕ್ಷಿಸಿದ ವೈದ್ಯರು ಫುಡ್ ಪಾಯಿಸನ್‌ನಿಂದ ಮಗು ಅಸ್ವಸ್ಥಗೊಂಡಿದೆ ಎಂದು ತಿಳಿಸಿದ್ದರು. ನಂತರ ಮನೆಗೆ ಬಂದು ತಾವು ಬೇಕರಿಯಿಂದ ತಂದಿದ್ದ ಕೇಕನ್ನು ಪರೀಕ್ಷಿಸಿದಾಗ ದುರ್ವಾಸನೆಯಿಂದ ಕೂಡಿದ್ದ ಕೇಕ್‌ನಲ್ಲಿ ಹುಳುಗಳು ಪತ್ತೆಯಾಗಿವೆ. ಇದನ್ನು ಕಂಡ ಆನಂದ್ ಸ್ನೇಹಿತರ ಜತೆಗೂಡಿ ಬೇಕರಿಗೆ ತೆರಳಿ ಮಾಲೀಕರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡು ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಅವರ ನಿರ್ದೇಶನದ ಮೇರೆಗೆ ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ನಿಂಗೇಗೌಡ ಮತ್ತು ಮಹೇಶ್ ಕಾವೇರಿ ಬೇಕರಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಶುಚಿತ್ವದಿಂದ ಕೂಡಿದ್ದ ಕೊಠಡಿ, ಎಲ್ಲೆಂದರಲ್ಲಿ ಬಿದ್ದು ಚೆಲ್ಲಾಡುತ್ತಿದ್ದ ಆಹಾರ ಪದಾರ್ಥಗಳು, ಕೊಳೆತು ನಾರುತ್ತಿದ್ದ ಕೇಕ್ ಮೇಲೆ ಸಿಂಪಡಿಸುವ ಕಲರ್ ಮತ್ತು ಕ್ರೀಮ್ ಕಂಡು ನಿಬ್ಬೆರಗಾದರು. ಅಶುಚಿತ್ವದಿಂದ ಕೂಡಿದ್ದನ್ನು ಕಂಡು ಬೇಕರಿಗೆ ಬೀಗ ಹಾಕಿದರು.
ಪಟ್ಟಣದ ಟಿ.ಬಿ.ಬಡಾವಣೆಯ ಬಡಗೂಡಮ್ಮ ದೇವಸ್ಥಾನದ ಮುಂಭಾಗದ ಕಾವೇರಿ ಬೇಕರಿಯ ಮತ್ತೊಂದು ಶಾಖೆಗೆ ಭೇಟಿ ನೀಡಿ ಅಲ್ಲಿಯೂ ಅಶುಚಿತ್ವ ಮತ್ತು ಅವಧಿ ಮುಗಿದ ಪದಾರ್ಥಗಳು ಕಂಡು ಬಂದ ಹಿನ್ನೆಲೆಯಲ್ಲಿ ಆ ಬೇಕರಿಯನ್ನೂ ಬಂದ್ ಮಾಡಿಸಿದರು.
ಮಂಗಳವಾರ ಬೆಳಗ್ಗೆ ಸ್ಥಳಕ್ಕಾಗಮಿಸಿದ ಆಹಾರ ಸುರಕ್ಷತಾ ಅಧಿಕಾರಿ ಬಸವರಾಜು ಎರಡೂ ಬೇಕರಿಗಳನ್ನು ಪರಿಶೀಲಿಸಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬೇಕರಿಯಲ್ಲಿದ್ದ ಕೇಕ್ ಮತ್ತು ಇನ್ನಿತರ ಪದಾರ್ಥಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಕೊಂಡೊಯ್ದರು. ಮಾಲೀಕನ ವಿರುದ್ಧ ದೂರು ದಾಖಲಿಸಿದರು.
ಟಿ.ಬಿ.ಬಡಾವಣೆಯ ಬಡಗೂಡಮ್ಮ ದೇವಸ್ಥಾನದ ಮುಂಭಾಗದ ಬೇಕರಿಯಲ್ಲಿನ ಕೇಕ್, ತಿಂಡಿ-ತಿನಿಸುಗಳು ಗುಣಮಟ್ಟದಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಬಸವರಾಜು ತಿಳಿಸಿದ್ದಾರೆ.