ಬೆಸಗರಹಳ್ಳಿ ಬಸ್ ನಿಲ್ದಾಣದ ಬಳಿ ರಸ್ತೆ ಸಂಚಾರ ತಡೆ

ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಬೆಸಗರಹಳ್ಳಿ ಬಸ್ ನಿಲ್ದಾಣದ ಆವರಣದಲ್ಲಿ ರಸ್ತೆ ಸಂಚಾರ ತಡೆ ಮಾಡಿ ಬುಧವಾರ ಪ್ರತಿಭಟಿಸಿದರು.
30M.D.R.2....
Published on

ಮದ್ದೂರು: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಬೆಸಗರಹಳ್ಳಿ ಬಸ್ ನಿಲ್ದಾಣದ ಆವರಣದಲ್ಲಿ ರಸ್ತೆ ಸಂಚಾರ ತಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.


ರಾಜ್ಯ ರೈತ ಸಂಘದ ಮುಖಂಡ ಸೊ.ಸಿ. ಪ್ರಕಾಶ್ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಅವೈಜ್ಞಾನಿಕವಾಗಿ ಕಾವೇರಿ ನೀರನ್ನು ಬಿಡಲಾಗುತ್ತಿದೆ. ಇಲ್ಲಿನ ರೈತರು ಬೆಳೆದ ಬೆಳೆಗಳಿಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಿ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಬೆಳೆಗಳಿಗೆ ನೀರು ನೀಡಬೇಕು ಕೆರೆ ಕಟ್ಟೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು.


ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಜಿಲ್ಲೆಯ ರೈತರು ಬೆಳೆದಿರುವ ಬೆಳೆಗಳು ಒಣಗುತ್ತಿವೆ. ವಾಡಿಕೆಯಂತೆ ಮಳೆಯಾಗದ ಕಾರಣ ಬರದ ಛಾಯೆ ಆವರಿಸಿದೆ. ಆದ್ದರಿಂದ, ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸಬೇಕು ಕೇಂದ್ರದಲ್ಲಿ ರಾಜ್ಯ ಸರ್ಕಾರ ಪ್ರಬಲವಾಗಿ ವಾದ ಮಂಡಿಸಿ ಕುಡಿಯುವ ನೀರು ಹಾಗೂ ಸಬೆಳೆಗಳಿಗೆ ನೀರನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಲೋಕಸಭೆಯ ಚುನಾವಣೆಯ ದೃಷ್ಟಿ ಇಟ್ಟುಕೊಂಡು ತಮಿಳುನಾಡಿಗೆ ನೀರು ನೀಡಿರುವುದು ಸರಿಯಲ್ಲ. ತಕ್ಷಣ ನೀರು ನಿಲ್ಲಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದರು.


ರೈತ ಸಂಘದ ಮುಖಂಡರಾದ ರಮೇಶ, ವೆಂಕಟೇಶ, ಶಿವಲಿಂಗು, ಮರಲಿಂಗ, ಪ್ರಭುಲಿಂಗ, ಉಮೇಶ, ಚಂದ್ರು, ಚೆನ್ನಪ್ಪ, ಪುಟ್ಟಲಿಂಗಯ್ಯ, ಪಾರ್ಥ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net