

ಮದ್ದೂರು: ಬೆಸಗರಹಳ್ಳಿ ವ್ಯಾಪ್ತಿಯ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸುಸಜ್ಜಿತ ಹಾಗೂ ಆಕ್ಸಿಜನ್ ಸೌಲಭ್ಯ ಹೊಂದಿರುವ ಆಂಬುಲೆನ್ಸ್ ಅನ್ನು ಸರ್ಕಾರದ ವತಿಯಿಂದ ನೀಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ಹೇಳಿದರು.
ತಾಲೂಕಿನ ಬೆಸಗರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ 25 ಲಕ್ಷ ರೂ. ವೆಚ್ಚದ ಆಂಬುಲೆನ್ಸ್ ವಾಹನಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿ, ಬೆಸಗರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಇಲ್ಲದ ಕಾರಣ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅನನುಕೂಲ ಆಗುತ್ತಿರುವ ಬಗ್ಗೆ ಇಲ್ಲಿನ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ನನ್ನ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸರ್ಕಾರದ ವಿಶೇಷ ಅನುದಾನದಲ್ಲಿ ಆಂಬುಲೆನ್ಸ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮಾಂತರ ಪ್ರದೇಶದ ರೋಗಿಗಳಿಗೆ ಅನುಕೂಲವಾಗುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ವಾಹನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ನಾನು ಮತ್ತು ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ ಇಬ್ಬರು ಸೇರಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರ್ಗಮದ್ಯೆ ಮದ್ದೂರು ಅಥವಾ ಮಂಡ್ಯದಲ್ಲಿ ಟ್ರಾಮ್‌ಕೇರ್ ತೆರೆಯುವಂತೆ, ಮಂಡ್ಯದ ಕ್ಯಾನ್ಸರ್ ಆಸ್ಪತ್ರೆಗೆ ಉನ್ನತ್ತೀಕರಣಕ್ಕೆ 5.50 ಕೋಟಿ ರೂ. ನೀಡುವಂತೆ ಹಾಗೂ ಬೆಸಗರಹಳ್ಳಿಯನ್ನು ಪುರಸಭೆ ಅಥವಾ ಪಟ್ಟಣದ ಪಂಚಾಯಿತಿ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 7 ಜೆಡಿಎಸ್ ಶಾಸಕರು ಗೆದ್ದಿದ್ದರೂ ಯಾವುದೇ ಅಭಿವೃದ್ಧಿಯನ್ನು ಜಿಲ್ಲೆ ಕಂಡಿಲ್ಲ. ನಾನು ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಇಬ್ಬರು ಸೇರಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಮಾತನಾಡಿ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಹಾಗೂ ಮಧು ಜಿ.ಮಾದೇಗೌಡ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವುದು ಮೆಚ್ಚುಗೆಯ ವಿಷಯ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.
ಗ್ರಾಪಂ ಅಧ್ಯಕ್ಷೆ ವಿ.ಜ್ಯೋತಿ, ಉಪಾಧ್ಯಕ್ಷೆ ಅಮಲಿಸಂಗೀತಾ, ಟಿಎಚ್‌ಒ ಡಾ.ರವೀಂದ್ರ, ವೈದ್ಯಾಧಿಕಾರಿ ಡಾ.ಕಿರಣ್, ತಾಪಂ ಮಾಜಿ ಅಧ್ಯಕ್ಷ ಸಿ.ನಾಗೇಗೌಡ, ಸದಸ್ಯ ಕೆ.ಆರ್.ಮಹೇಶ್, ಮುಖಂಡರಾದ ದೇಶಹಳ್ಳಿ ಆರ್.ಮೋಹನ್‌ಕುಮಾರ್, ಪದ್ಮನಾಭ, ವಿಜೇಂದ್ರ ರಾಧಾಕೃಷ್ಣ ಇದ್ದರು.