

ಮದ್ದೂರು : ತಾಲೂಕಿನ ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದೆ. ಅಧ್ಯಕ್ಷೆ ರಾಧಿಕಾ ಪ್ರಸಾದ್ ಅಧಿಕಾರಕ್ಕೆ ಯಾವುದೇ ಧಕ್ಕೆ ಇಲ್ಲವಾಗಿದೆ. ರಾಜ್ಯದ ಅತಿದೊಡ್ಡ ಅಂದರೆ 27 ಸದಸ್ಯ ಬಲದ ಬೆಸಗರಹಳ್ಳಿ ಗ್ರಾ.ಪಂ. ಅಧ್ಯಕ್ಷೆ ರಾಧಿಕಾ ವಿರುದ್ಧ ಸ್ವಪಕ್ಷೀಯರು ಸೇರಿದಂತೆ ಇತರ ಸದಸ್ಯರು ಕಳೆದ ಎರಡು ವಾರಗಳ ಹಿಂದೆ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಇದರ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಗೆ ಈ ಹಿಂದೆ ಅಧ್ಯಕ್ಷರ ವಿರುದ್ಧ ತಮ್ಮ ಅಸಹನೆ ವ್ಯಕ್ತಪಡಿಸಿ ಸಹಿ ಹಾಕಿದ್ದ 18 ಸದಸ್ಯರ ಪೈಕಿ 17 ಸದಸ್ಯರು ಮಾತ್ರ ಸಭೆಗೆ ಹಾಜರಾದ ಹಿನ್ನೆಲೆಯಲ್ಲಿ ಒಂದು ಮತದ ಅಂತರದಿಂದ ಅವಿಶ್ವಾಸ ಮಂಡನೆಗೆ ಸೋಲುಂಟಾಗಿದೆ.
18 ಸಹಿ ಮಾಡಿದ್ದ ಸದಸ್ಯರ ಪೈಕಿ ಬೆಸಗರಹಳ್ಳಿ ಗ್ರಾ.ಪಂ. ವಾರ್ಡ್ ನಂ. 1 ರ ಸದಸ್ಯ ರಮೇಶ್ ಅವಿಶ್ವಾಸ ನಿರ್ಣಯ ಮಂಡನೆ ಸಭೆಗೆ ಗೈರು ಹಾಜರಾಗುವ ಮೂಲಕ ಅಚ್ಚರಿ ಮೂಡಿಸಿದಂತಾಗಿದೆ. ಗ್ರಾಪಂ ಅಧ್ಯಕ್ಷೆ ರಾಧಿಕಾ (ಜಾ.ದಳ ಬೆಂಬಲಿತ) ಮತ್ತು ಉಪಾಧ್ಯಕ್ಷೆ ಶಾಹೀನ್ ತಾಜ್ (ಕಾಂಗ್ರೆಸ್ ಬೆಂಬಲತ) ಸದ್ಯ ಅಧಿಕಾರದಲ್ಲಿದ್ದಾರೆ. ಅವಿಶ್ವಾಸ ನಿರ್ಣಯ ಸಭೆ ಉಪ ವಿಭಾಗಾಧಿಕಾರಿ ಶಿವಮೂರ್ತಿ ನೇತೃತ್ವದಲ್ಲಿ ಆಯೋಜನೆಗೊಂಡಿತ್ತು. ಕೇವಲ 17 ಅತೃಪ್ತ ಸದಸ್ಯರು ಪಾಲ್ಗೊಂಡು, ಉಳಿದ 10 ಸದಸ್ಯರು ಸಭೆಯಿಂದ ಹೊರ ಉಳಿದಿದ್ದ ಕಾರಣ ಅವಿಶ್ವಾಸದ ಆಶಯ ಈಡೇರದಂತಾಗಿ ಮುಖಂಡರಿಗೆ ಮುಜುಗರ ಉಂಟು ಮಾಡಿತು.