

ಹೊಸನಗರ: ತಾಲೂಕಿನ ನಗರ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದ್ದು ಎರಡು ದಿನಗಳ ವರ್ಣರಂಜಿತ ಉತ್ಸವಕ್ಕೆ ಜ.20ರಂದು ಚಾಲನೆ ದೊರೆಯಲಿದೆ.
1994ರಲ್ಲಿ ಮಾಜಿ ಸ್ಪೀಕರ್ ಡಿ.ಬಿ.ಚಂದ್ರೇಗೌಡ, ಅಂದು ಶಾಸಕರಾಗಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಅಂದಿನ ಜಿಪಂ ಸದಸ್ಯ ದಿ. ಎಚ್.ಸಿ.ಹಿರಿಯಣ್ಣ ಗೌಡ ಪ್ರಯತ್ನದಲ್ಲಿ ಆರಂಭಗೊಂಡ ಸರ್ಕಾರಿ ಪ್ರೌಢಶಾಲೆ 28 ವರ್ಷ ಪೂರೈಸಿದೆ. ಕರೊನಾ ಸಮಸ್ಯೆಯಿಂದಾಗಿ ಬೆಳ್ಳಿಹಬ್ಬವನ್ನು ಈ ವರ್ಷ ಹಮ್ಮಿಕೊಳ್ಳಲಾಗಿದೆ.
ಜ.20ರಂದು ನಗರ ಬಂಡಿಮಠದಿಂದ ಚಂಡೆಯ ನಿನಾದ, ಬಣ್ಣದ ವೇಷಗಳ ಕಲಾತಂಡಗಳ ಮಿಳಿತದೊಂದಿಗೆ ಬೆಳಗ್ಗೆ 9 ಗಂಟೆಗೆ ಶ್ರೀ ವಾಗ್ದೇವಿ ಮೆರವಣಿಗೆ ಹಮ್ಮಿಕೊಂಡಿದ್ದು ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ಚಾಲನೆ ನೀಡುವರು. ಮೆರವಣಿಗೆ ನಗರ, ಚಿಕ್ಕಪೇಟೆ, ನೂಲಿಗ್ಗೇರಿ ಮೂಲಕ ಶಾಲಾ ಆವರಣ ಪ್ರವೇಶಿಸಲಿದೆ. ಬೆಳಗ್ಗೆ 11ಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಬೆಳ್ಳಿಹಬ್ಬ ಉದ್ಘಾಟಿಸುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಸಾಂಸ್ಕೃತಿಕ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡುವರು. ವಿಶೇಷ ಆಹ್ವಾನಿತರಾಗಿ ಸಾಹಿತಿ ನಾ.ಡಿಸೋಜ ಭಾಗವಹಿಸುವರು.
ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶೈಲಜಾ ಪಾಂಡುರಂಗ ಗೌಡ ಅಧ್ಯಕ್ಷತೆ ವಹಿಸಲಿದ್ದು ವಿಧಾನ ಪರಿಷತ್ ಸದಸ್ಯರು, ಶಿಕ್ಷಣ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಸ್ಥಳೀಯ ಪ್ರಮುಖರು ಉಪಸ್ಥಿತರಿರುವರು.
ಬೆಳ್ಳಿಹಬ್ಬದ ಮೊದಲ ದಿನ ಸಾಣೇಹಳ್ಳಿ ಮಠದ ಶಿವಸಂಚಾರ ಖ್ಯಾತಿಯ ಬಿದನೂರು ಸಹೋದರಿಯರಾದ ಜ್ಯೋತಿ ಮತ್ತು ದಾಕ್ಷಾಯಿಣಿ ಅವರ ಗೀತಗಾಯನ, ನಾ. ಡಿಸೋಜ ಅಧ್ಯಕ್ಷತೆಯಲ್ಲಿ ಮುಳುಗಡೆ ತಲ್ಲಣಗಳ ಮಾತು ಮಂಥನ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಕಾಂತಾರ ಚಿತ್ರದ ಕಲಾವಿದರ ಸಂಗಮದಲ್ಲಿ ಕಚಗುಳಿ ಕಾರ್ಯಕ್ರಮ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಬೆಳ್ಳಿಹಬ್ಬದ ಎರಡನೇ ದಿನ ಜ.21ರಂದು ಗುರು ವಂದನೆ, ಸೇವಾ ಸ್ಮರಣೆ, ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ರಸದೌತಣ, ಸ್ಥಳೀಯರಿಂದ ಹಾಸ್ಯ ಕಾರ್ಯಕ್ರಮ, ಗಾಯಕ ನವೀನಚಂದ್ರ ಕೊಪ್ಪ ಸಂಗಡಿಗರಿಂದ ಕಲಾಮಿಲನ್-2023 ಮೂಡಿಬರಲಿದೆ.
ಎರಡನೇ ದಿನ ಸಂಜೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಜಿಪಂ ಮಾಜಿ ಸದಸ್ಯ ಸುರೇಶ ಸ್ವಾಮಿರಾವ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಶಿಮುಲ್ ನಿರ್ದೇಶಕ ಗುರುಶಕ್ತಿ ವಿದ್ಯಾಧರ್, ಪಪಂ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಮ್ಯಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ಬಂಕ್ರಿಬೀಡು ಮಂಜುನಾಥ್, ಎಚ್.ಜಿ.ರಮಾಕಾಂತ್, ಕಣಕಿ ಮಹೇಶ್ ಇತರರು ಭಾಗವಹಿಸುವರು. ಸಮಾರೋಪದ ಅಧ್ಯಕ್ಷತೆಯನ್ನು ರಜತ ಮಹೋತ್ಸವ ಸಮಿತಿ ಅಧ್ಯಕ್ಷ ರವಿ ಬಿದನೂರು ವಹಿಸಲಿದ್ದಾರೆ ಎಂದು ಮುಖ್ಯ ಶಿಕ್ಷಕ ಡಾ. ಜಿ.ಸುಧಾಕರ್ ತಿಳಿಸಿದ್ದಾರೆ.