

ಚಿತ್ರದುರ್ಗ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯಿಂದ ಹಾನಿಗೊಳಗಾದ ಬೆಳೆಹಾನಿ ಪ್ರದೇಶಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ನಿಖರ ವರದಿ ನೀಡುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಬುಧವಾರ ಬೆಳೆಹಾನಿ, ಕುಡಿಯುವ ನೀರು ಪೂರೈಕೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿಲ್ಲವೆಂದು ರೈತರಿಂದ ದೂರುಗಳು ಬಂದಿವೆ. ಬೆಳೆ ಹಾನಿ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸದ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ಎಚ್ಚರಿಸಿದರು.
ಹೊಳಲ್ಕೆರೆ ತಾಲೂಕಿನಲ್ಲಿ 25 ಎಕರೆ ಅಡಕೆ, 15 ಎಕರೆ ಮಾವು, 3 ಎಕರೆ ಬಾಳೆಗೆ ಹಾನಿಯಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ 120 ಎಕರೆ ಪಪ್ಪಾಯಿ, 8.30 ಎಕರೆ ಕೃಷಿ ಬೆಳೆಗಳು ಹಾನಿಯಾಗಿವೆ. ಚಿತ್ರದುರ್ಗ ತಾಲೂಕಿನ ವಿ. ಪಾಳ್ಯ, ನಲ್ಲೆಕಟ್ಟೆ ಗ್ರಾಮಗಳಲ್ಲಿ ಅಡಕೆ ಹಾಗೂ ಪಪ್ಪಾಯಿ ಹಾನಿಯಾಗಿದೆ.
ಹಿರಿಯೂರು ತಾಲೂಕಿನಲ್ಲಿ ಒಂದು ಜಾನುವಾರು ಮೃತಪಟ್ಟಿದೆ. ತೋಟಗಾರಿಕೆ ಬೆಳೆ, ಒಂದು ಮನೆಗೆ ಹಾನಿಯಾಗಿದೆ. ಹೊಸದುರ್ಗ ತಾಲೂಕಿನಲ್ಲಿ 4.20 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಮೊಳಕಾಲ್ಮೂರು ತಾಲೂಕಿನಲ್ಲಿ 1 ಹೆಕ್ಟೇರ್ ಕೃಷಿ ಹಾಗೂ 1 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿಯಾಗಿ ಒಂದು ಜಾನುವಾರು ಮೃತಪಟ್ಟಿದೆ, 6 ಮನೆಗಳು ಭಾಗಶಃ ಹಾನಿಗೀಡಾಗಿವೆ ಎಂದು ಆಯಾ ತಹಸೀಲ್ದಾರ್‌ಗಳು ಮಾಹಿತಿ ನೀಡಿದರು.
ಬೆಳೆಹಾನಿ ವರದಿ ಸಿದ್ಧವಾಗಿಟ್ಟುಕೊಂಡು ಪರಿಹಾರ ಸಾಫ್ಟವೇರ್ ಓಪನ್ ಆದ ತಕ್ಷಣ ಎಂಟ್ರಿ ಮಾಡಬೇಕು. ನಿಯಮಾನುಸಾರ ಪರಿಹಾರ ವಿತರಣೆಗೆ ಕ್ರಮವಹಿಸಬೇಕು ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಬಸನಗೌಡ ಮೇಟಿ ಪಾಟೀಲ್ ಮಾತನಾಡಿ, ಹಿರಿಯೂರು ತಾಲೂಕು ವ್ಯಾಪ್ತಿಯಲ್ಲಿ ಪ್ರಸ್ತುತ 7 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಮಸ್ಯೆ ಉದ್ಭವಿಸುವಂಥ ಗ್ರಾಮಗಳ ನಿಖರ ಮಾಹಿತಿಗೆ ಡಿಸಿ ನಿರ್ದೇಶಿಸಿದರು. ಎಸಿ ಮೆಹಬೂಬ್ ಜಿಲಾನ್ ಖುರೇಷಿ ಮತ್ತಿತರರು ಇದ್ದರು.