

ದಾವಣಗೆರೆ: ಜಿಲ್ಲೆಯಲ್ಲಿ ಮಳೆ ಅಭಾವದಿಂದ ಉಂಟಾಗಿರುವ ಮೆಕ್ಕೆಜೋಳ ಹಾಗೂ ಇತರ ಬೆಳೆಹಾನಿಗೆ ಪರಿಹಾರ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿ ರಾಜ್ಯ ರೈತ ಸಂಘವು (ಪುಟ್ಟಣ್ಣಯ್ಯ ಬಣ) ನಗರದಲ್ಲಿ ಸೆ.4ರಂದು ಚಳವಳಿ ಹಮ್ಮಿಕೊಂಡಿದೆ.
ಸೋಮವಾರ ಬೆಳಗ್ಗೆ 11.30ಕ್ಕೆ ನಗರದ ಹೊಸ ಬಸ್‌ನಿಲ್ದಾಣ ಹತ್ತಿರದ ರೈತ ಸಂಘದ ಕಚೇರಿಯಿಂದ ಪ್ರತಿಭಟನೆ ಹೊರಟು ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಮಳೆ ಬಾರದಿರುವುದರಿಂದ ಮೆಕ್ಕೆಜೋಳ ಸೇರಿ ಎಲ್ಲ ಬೆಳೆ ಒಣಗುತ್ತಿವೆ. ರೈತರು ಬೀಜ, ರಸಗೊಬ್ಬರ ಮೊದಲಾದವುಗಳಿಗೆ ಪ್ರತಿ ಎಕರೆಗೆ ಸುಮಾರು 25 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿ ನಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
ಜಿಲ್ಲಾಡಳಿತ ಬೆಳೆಹಾನಿ ಕುರಿತಂತೆ ಗ್ರಾಪಂ ಹಾಗೂ ಹೋಬಳಿವಾರು ಸಮೀಕ್ಷೆ ನಡೆಸುವ ಮೂಲಕ ಸರ್ಕಾರಗಳಿಗೆ ವರದಿ ಸಲ್ಲಿಸಬೇಕು. ದಾವಣಗೆರೆ ತಾಲೂಕು ಒಳಗೊಂಡಂತೆ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಬೆಳೆಹಾನಿಗೆ ಸಂಬಂಧಿಸಿದಂತೆ ರೈತರಿಗೆ ಪ್ರತಿ ಎಕರೆಗೆ ಕನಿಷ್ಟ 30 ಸಾವಿರ ರೂ. ಪರಿಹಾರ ನೀಡಬೇಕು. ಹೋಬಳಿ ಹಾಗೂ ತಾಲೂಕುವಾರು ಬರಪೀಡಿತ ಘೋಷಣೆ ಮಾಡುವ ಬಗ್ಗೆ ಜಿಲ್ಲಾ ಸಚಿವರು ಗಮನಹರಿಸಬೇಕು. ಜಿಲ್ಲೆಯಲ್ಲಿ ಆಗುತ್ತಿರುವ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ರೈತರು ಬ್ಯಾಂಕ್ ಸಾಲ ಪಾವತಿಸಲಾಗಿಲ್ಲ. ಇದಕ್ಕಾಗಿ ಬ್ಯಾಂಕ್‌ಗಳು ರೈತರಿಗೆ ನೋಟಿಸ್ ನೀಡುವುದನ್ನು ನಿಲ್ಲಿಸಬೇಕು. ಜಿಲ್ಲಾಧಿಕಾರಿ ಖುದ್ದು ಉಪವಿಭಾಗಾಧಿಕಾರಿ ಕಚೇರಿ ಬಳಿ ಬಂದು ರೈತರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಬೇಕು. ಇಲ್ಲದಿದ್ದರೆ ರಸ್ತೆ ಹಾಗೂ ರೈಲು ತಡೆ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೊಗ್ಗನೂರು ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಕರಿಲಕ್ಕೇನಹಳ್ಳಿ ರೇವಣಸಿದ್ದಪ್ಪ, ಹನುಮಂತಪ್ಪ, ಎಸ್.ಟಿ. ಪರಮೇಶ್ವರಪ್ಪ, ಚಟ್ಟೋಬನಹಳ್ಳಿ ಕಂಪ್ಲೇಶಿ, ತಿಪ್ಪೇಸ್ವಾಮಿ, ಧನ್ಯಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.