ಬೆಳೆಸಾಲ ಸಂಪೂರ್ಣ ಮನ್ನಾ ಮಾಡಿ: ರೈತ ಸಂಘ ಪ್ರತಿಭಟನೆ

SGR WEEE
Published on

ಸಾಗರ: ರೈತರ ಬೆಳೆಸಾಲ ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೆಳೆಗಾರರು ಗುರುವಾರ ತಾಪಂ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ಮಲೆನಾಡಿನ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ಅಹವಾಲು ಕೇಳುತ್ತಿಲ್ಲ, ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ. ತಿನ್ನಲು ಅನ್ನವನ್ನು ಅಮೆರಿಕದಿಂದ ತರುತ್ತಾರಾ? ಎಂದು ಪ್ರಶ್ನಿಸಿದರು.

ಮಲೆನಾಡಿನ ಪ್ರದೇಶದಲ್ಲಿ ಭಾರಿ ಅತಿವೃಷ್ಟಿಯಿಂದಾಗಿ ರೈತಾಪಿ ಕುಟುಂಬಗಳು ಬೀದಿಗೆ ಬಂದಿವೆ. ಅಡಕೆಗೆ ಎಲೆಚುಕ್ಕೆ ರೋಗ ಕಾಡುತ್ತಿದೆ. ಭತ್ತ ಮತ್ತು ಮೆಕ್ಕೆಜೋಳ ಬೆಳೆದವರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇಷ್ಟೆಲ್ಲ್ಲ ಸಮಸ್ಯೆಯಿದ್ದರೂ ರಾಜ್ಯದಲ್ಲಿ ಯಾವೊಬ್ಬ ಶಾಸಕರು ರೈತರ ಪರ ಧ್ವನಿ ಎತ್ತುತ್ತಿಲ್ಲ. ಅದರಲ್ಲೂ ಆಡಳಿತ ಪಕ್ಷದವರು ಚುನಾವಣೆ ಹತ್ತಿರ ಬರುತ್ತಿದೆ ಎಂದು ಬೆಳಗ್ಗಿನಿಂದ ಸಂಜೆಯವರೆಗೂ ಉದ್ಘಾಟನೆ, ಶಂಕುಸ್ಥಾಪನೆಯಲ್ಲಿ ನಿರತರಾಗಿದ್ದಾರೆ ಎಂದು ಕಿಡಿಕಾರಿದರು.

ಸಾಗರ ಕ್ಷೇತ್ರವೂ ಈ ಪರಿಸ್ಥಿತಿಯಿಂದ ಹೊರತಾಗಿಲ್ಲ. ಶಾಸಕರು ಅಭಿವೃದ್ಧಿಯ ಮಾತುಗಳನ್ನಾಡುತ್ತ ಗಣಪತಿ ಕೆರೆ ಸುತ್ತಲೂ ಸಂಚಾರ ನಡೆಸುತ್ತಾರೆ. ಕೆರೆಯೊಂದೇ ಅಭಿವೃದ್ಧಿಯಾದರೆ ಸಾಕೆ?. ಶಾಸನ ಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮೊದಲು ಪರಿಣಾಮಕಾರಿಯಾಗಿ ಮಾತನಾಡಿ ಸರ್ಕಾರದ ಗಮನ ಸೆಳೆಯಲಿ ಎಂದು ಆಗ್ರಹಿಸಿದರು.

ರೈತ ಸಂಘದ ತಾಲೂಕು ಕಾರ್ಯದರ್ಶಿ ರಮೇಶ್ ಐಗಿನಬೈಲು ಮಾತನಾಡಿ, ನಷ್ಟಕ್ಕೀಡಾದ ರೈತರ ಬೆಳೆಸಾಲ ಮನ್ನಾ ಮಾಡಬೇಕು, ಭತ್ತದ ಖರೀದಿ ಕೇಂದ್ರಗಳನ್ನು ಪ್ರತಿ ಹೋಬಳಿಯಲ್ಲಿ ತೆರೆಯಬೇಕು, ಮೊದಲು ರೈತರ ಭೂಮಿಗಳ ಪಕ್ಕಾ ಪೋಡಿಯನ್ನು ಸರ್ಕಾರದ ಖರ್ಚಿನಲ್ಲೇ ಮಾಡಬೇಕು, ಕಂದಾಯ ಮತ್ತು ಅರಣ್ಯ ಭೂಮಿ, ಬಗರ್‌ಹುಕುಂ ಮಂಜೂರಾತಿ ಅಲ್ಲದೇ ಅಕ್ರಮ-ಸಕ್ರಮ ಕಟ್ಟಡ ಮಂಜೂರಾತಿ ತೀವ್ರ ವಿಳಂಬವಾಗಿರುವುದಕ್ಕೆ ಶಾಸಕರು ಜನತೆಗೆ ಉತ್ತರ ನೀಡಲಿ ಎಂದರು.

ಶಾಸಕರ ಕಚೇರಿಗೆ ಸದಾ ಬೀಗ: ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ಮಾತನಾಡಿ, ಸಾಗರ ಮತ್ತು ಸೊರಬ ಕ್ಷೇತ್ರದ ಶಾಸಕರು ರೈತರು ನೀಡಿದ ಮತದಿಂದಲೇ ಚುನಾಯಿತ ಪ್ರತಿನಿಧಿಗಳಾಗಿದ್ದೇವೆ ಎಂಬುದನ್ನು ಮರೆತಿದ್ದಾರೆ. ಸಾಗರ ತಾಪಂನಲ್ಲಿ ಇಬ್ಬರೂ ಶಾಸಕರ ಕಚೇರಿ ಇದೆ. ಈ ಕಚೇರಿ ಸದಾ ಬೀಗ ಹಾಕಿರುತ್ತದೆ. ಇಂದು ಅದೇ ಸ್ಥಿತಿಯಲ್ಲಿದೆ. ನಾವು ಮುಚ್ಚಿದ ಬಾಗಿಲ ಎದುರು ಧಿಕ್ಕಾರ ಕೂಗಿದ್ದೇವೆ. ದೂರವಾಣಿ ಸಂಪರ್ಕ ಮಾಡಿದರೆ ಮಾತಿಗೆ ಸಿಗುವುದಿಲ್ಲ. ವರ್ತನೆಯನ್ನು ಸರಿಪಡಿಸಿಕೊಳ್ಳದೆ ಹೋದರೆ ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮಲೆನಾಡಿನಲ್ಲಿ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಕೃಷಿ ಅಧಿಕಾರಿಗಳು ನಷ್ಟವನ್ನು ಗದ್ದೆಯಲ್ಲಿ ಇಳಿಯದೇ ಲೆಕ್ಕಾಚಾರ ಮಾಡುತ್ತಿದ್ದಾರೆ. ಇನ್ನು ಅಡಕೆಗೆ ಬಾಧಿಸುತ್ತಿರುವ ಎಲೆಚುಕ್ಕೆ ರೋಗಕ್ಕೆ ಔಷಧಿ, ಪರಿಹಾರ ಎಲ್ಲವೂ ಫೋಟೋ ಮತ್ತು ಪ್ರಚಾರದಲ್ಲಿ ಮುಳುಗಿವೆ. ಸಾಗರ ಕ್ಷೇತ್ರದ ಶಾಸಕರು ಮೊದಲು ಮಲೆನಾಡಿನ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net