

ಕಲಬುರಗಿ: ಜಿಲ್ಲೆಯಲ್ಲಿ ತೇವಾಂಶ ಕೊರತೆಯಿಂದ ತೊಗರಿ ಒಣಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಕೃಷಿ ಚಟುವಟಿಕೆಗೆ ಆರ್ಥಿಕ ತೊಂದರೆ ಎದುರಿಸುತ್ತಿರುವ ರೈತರಿಗೆ ತಕ್ಷಣ ಬೆಳೆವಿಮೆ ಪರಿಹಾರ ಮೊತ್ತ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಮೊಜಾಂಬಿಕ್, ತಾಂಜೇನಿಯಾ, ಮ್ಯಾನ್ಮಾರ್, ಮಾಲವಿ, ಬ್ರೆಜಿಲ್ ಸೇರಿ ಹೊರದೇಶಗಳಲ್ಲಿನ ತೊಗರಿ ೧,೮೮,೫೨೦ ಮೆಟ್ರಿಕ್ ಟನ್ ಆಮದು ಮಾಡಿಕೊಂಡಿದ್ದರಿಂದ ಇಡೀ ಮಾರುಕಟ್ಟೆ ನೆಲ ಕಚ್ಚಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಸರ್ಕಾರ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಕಿಡಿಕಾರಿದರು.
ಡಾ.ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ರಾಷ್ಟ್ರೀಯ ರೈತ ಆಯೋಗ ೨೦೦೬ರ ತನ್ನ ವರದಿಯಲ್ಲಿ ರೈತರನ್ನು ಕೃಷಿ ಬಿಕ್ಕಟ್ಟಿನಿಂದ ಪಾರು ಮಾಡಲು ಸಮಗ್ರ ಕೃಷಿ ವೆಚ್ಚ ಕನಿಷ್ಠ ಶೇ.೫೦ ಹೆಚ್ಚಿನ ಲಾಭದಾಯಕ ಬೆಲೆ ನೀಡಬೇಕು ಎಂದು ಹೇಳಿದೆ. ಆದರೆ ೧೯ ವರ್ಷ ನಂತರವೂ ಪೊಳ್ಳು ಭರವಸೆಯಾಗಿ ಉಳಿದಿದೆ. ನಿರಂತರ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚ ರೈತರನ್ನು ಚಿಂತೆ ದೂಡುತ್ತಿದೆ. ಆದರೆ ಅವರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯುತ್ತಿಲ್ಲ. ದೇಶದಲ್ಲಿ ಚಾಲ್ತಿಯಲ್ಲಿರುವ ಕೃಷಿ ಬಿಕ್ಕಟ್ಟಿನಿಂದಾಗಿ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ನಿಯಂತ್ರಿತ ಬೆಲೆ ವ್ಯವಸ್ಥೆ ಪುನಃ ಸ್ಥಾಪಿಸಬೇಕು. ರೈತರಿಗೆ ಸೂಕ್ತ ಬೆಲೆಯಲ್ಲಿ ರಸಗೊಬ್ಬರ ಒದಗಿಸುವುದನ್ನು ಖಚಿತಪಡಿಸಬೇಕು. ಸಾರ್ವಜನಿಕ ವಲಯದಲ್ಲಿ ರಸಗೊಬ್ಬರ ಉತ್ಪಾದನೆಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಬೇಕು. ರಸಗೊಬ್ಬರ ಸಂಗ್ರಹ, ಬ್ಲ್ಯಾಕ್ ಮಾರ್ಕೆಟ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರಸಗೊಬ್ಬರ ಬಿಕ್ಕಟ್ಟಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆ ಪ್ರಮುಖರಾದ ಶರಣಬಸಪ್ಪ ಮಮಶೆಟ್ಟಿ, ದೇವು ಬಿರಾದಾರ, ಚಂದಪ್ಪ ಪೂಜಾರಿ, ಜಾಫರ್ ಖಾನ್, ಪರಮೇಶ್ವರ ಕಾಂತಾ, ಸಿದ್ದಪ್ಪ ಕಲಶೆಟ್ಟಿ, ಪ್ರಭು ಪ್ಯಾರಸಾಬಾದಿ, ದೇವೀಂದ್ರಪ್ಪ ಪಾಟೀಲ್, ಶಿವಾ ಸಲಗರ ಇತರರಿದ್ದರು. ಮುಖ್ಯಮಂತ್ರಿ, ಪ್ರಧಾನಿಗೆ ಬರೆದ ಮನವಿಪತ್ರವನ್ನು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಸಲ್ಲಿಸಲಾಯಿತು.