

ಚಿಕ್ಕಮಗಳೂರು: ಬೀಟಮ್ಮ ಗ್ಯಾಂಗ್‌ನ ಕಾಡಾನೆಗಳು ಮೂಡಿಗೆರೆ ತಾಲೂಕಿನ ಕೆಸವಿನ ಮನೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದು ಹತ್ತಾರು ಎಕರೆ ಕಾಫಿ ತೋಟ ಸರ್ವನಾಶ ಮಾಡುತ್ತಿವೆ. ಕೂಡಲೇ ಈ ಆನೆಗಳನ್ನು ಸ್ಥಳಾಂತರಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಆಗ್ರಹಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳಲ್ಲಿ ಆನೆಗಳನ್ನು ಸ್ಥಳಾಂತರ ಮಾಡದಿದ್ದರೆ ಅರಣ್ಯ ಇಲಾಖೆ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಳೆದ ೧೫ ದಿನಗಳಿಂದ ಬೀಟಮ್ಮ ಕಾಡಾನೆ ತಂಡ ಚಿಕ್ಕಮಗಳೂರು ಹೊರವಲಯದ ಕೆ.ಆರ್.ಪೇಟೆ, ಆಲದಗುಡ್ಡೆ ಸುತ್ತಮುತ್ತ ಬೀಡು ಬಿಟ್ಟಿದೆ. ಎರಡು ದಿನದ ಹಿಂದೆ ಕೆಸವಿನಮನೆ ಬೈರೇಗೌಡರ ಕಾಫಿ ತೋಟವನ್ನು ಆನೆಗಳ ಹಿಂಡು ಬೇರು ಸಹಿತ ಕಿತ್ತು ಹಾಕಿ ಸಾವಿರಾರು ಕಾಫಿ ಗಿಡಗಳನ್ನು ಸರ್ವನಾಶ ಮಾಡಿವೆ ಎಂದು ದೂರಿದರು.
ಕಾಡಾನೆ ದಾಳಿಗೆ ಅರಣ್ಯ ಇಲಾಖೆಯೇ ನೇರ ಹೊಣೆಯಾಗಿದೆ. ಕೆಸವಿನಮನೆ ಬೈರೇಗೌಡರ ತೋಟದಲ್ಲೇ ದಿನಗಟ್ಟಲೆ ದಿಗ್ಬಂದನ ಹಾಕಿ ಆನೆಗಳನ್ನು ಓಡಿಸದೆ ಇದ್ದುದ್ದೆ ಬೆಳೆಹಾನಿಗೆ ಕಾರಣ. ಈ ನಡುವೆ ಆಲ್ದೂರು ವಲಯದ ಫಾರೆಸ್ಟರ್ ರಮೇಶ್ ರೈತರಿಗೆ ಉಡಾಫೆ ಉತ್ತರ ಕೊಟ್ಟು ಅರ್ಜಿ ಕೊಡಿ ನಂತರ ಪರಿಶೀಲನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿ ಅವೈಜ್ಞಾನಿಕವಾಗಿ ಆನೆಗಳನ್ನು ಚದುರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಆನೆಗಳನ್ನು ಸ್ವಸ್ಥಾನಕ್ಕೆ ಸೇರಿಸುವ ಕೆಲಸ ಮಾಡುತ್ತಿಲ್ಲ. ಆನೆ ಓಡಿಸಲು ವೈಜ್ಞಾನಿಕ ವಿಧಾನ ಬಳಸುತ್ತಿಲ್ಲ. ಕಂಚೇನಹಳ್ಳಿ ಅರಣ್ಯದಲ್ಲಿ ಆನೆಗಳು ವಾಸ್ತವ್ಯ ಹೂಡಿವೆ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ತಿಳಿಸಿದರು.
ಬೀಟಮ್ಮ ಗ್ಯಾಂಗ್‌ನಲ್ಲಿ ೨೬ ಆನೆಗಳ ಜೊತೆ ಮರಿ ಆನೆಯೊಂದು ಬೀಡು ಬಿಟ್ಟಿದ್ದು, ಅದನ್ನು ಓಡಿಸದಂತೆ ನಮಗೆ ನಿರ್ದೇಶನವಿದೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಾರೆ. ಕೂಡಲೇ ವೈಜ್ಞಾನಿಕ ರೀತಿಯಲ್ಲಿ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು. ಜೊತೆಗೆ ಆನೆಗಳು ಉಂಟು ಮಾಡಿರುವ ಹಾನಿಗೆ ವೈಜ್ಞಾನಿಕ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಗಳೂರು ಹಾಗೂ ಮೂಡಿಗೆರೆ ಎರಡು ಕ್ಷೇತ್ರದ ಶಾಸಕರು ಈ ಬಗ್ಗೆ ಗಮನ ಹರಿಸದೆ ಬೇಜವಾಬ್ದಾರಿ ತೋರಿದ್ದಾರೆ. ತಮಗೆ ಲಾಭವಾಗುವ ಕಡೆ ಮಾತ್ರ ಅವರು ಇರುತ್ತಾರೆ ಎಂದು ಆರೋಪಿಸಿದರು.
ಕಳೆದ ವರ್ಷ ಒಬ್ಬ ಕಾರ್ಮಿಕರನ್ನು ಆನೆ ಬಲಿ ಪಡೆಯಿತು. ಭತ್ತ, ರಾಗಿ, ಜೋಳ ಬೆಳೆಗಳನ್ನು ಸಾಕಷ್ಟು ಹಾನಿ ಮಾಡಿವೆ. ಆದರೆ, ಇಲಾಖೆ ಮೂರು ಕಾಸಿನ ಪರಿಹಾರ ನೀಡಿತು. ಇಲ್ಲೊಬ್ಬರು ಫಾರೆಸ್ಟ್ ರಮೇಶ್ ಎಂಬಾತ ಮನಸ್ಸಿಗೆ ಬಂದAತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಉಡಾಫೆ ಉತ್ತರ ಕೊಡುತ್ತಾರೆ. ಹೀಗಾಗಿ ಸ್ವತಃ ಡಿಎಫ್‌ಓ ರಮೇಶ್‌ಬಾಬು ಅವರೇ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಬೇಕು. ಆಗಿರುವ ನಷ್ಟವನ್ನು ಭರ್ತಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಪ್ರಮುಖರಾದ ಡಿ.ಮಹೇಶ್, ಚಂದ್ರಶೇಖರ್, ಉಮೇಶ್, ದಯಾನಂದ, ಚಂದ್ರೇಗೌಡ, ದುರ್ಗೇಶ್, ಪೂರ್ಣೇಶ್, ಸಂತ್ರಸ್ಥ ರೈತ ಬೈರೇಗೌಡ ಉಪಸ್ಥಿತರಿದ್ದರು.