ಬೆಳೆಗೆ ಬೆಲೆ ಸಿಕ್ಕರೆ ಮಾತ್ರ ರೈತರ ಉದ್ಧಾರ

Qute Eshwar khandre
Published on

ಭಾಲ್ಕಿ: ದೇಶದ ಬೆನ್ನೆಲುಬು ನಮ್ಮ ರೈತರಾಗಿದ್ದು, ಅವರು ಬೆಳೆದ ಬೆಲೆಗೆ ಬೆಂಬಲ ಬೆಲೆ ಸಿಕ್ಕಾಗ ಮಾತ್ರ ರೈತರ ಉದ್ಧಾರ ಸಾಧ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ತೋಟಗಾರಿಕೆ ಕಚೇರಿ ಆವರಣದಲ್ಲಿ ಶನಿವಾರ ನೂತನ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೈತರಿಗೆ ಬೇಕಾಗುವ ಉತ್ತಮ ವಾತಾವರಣವಿದ್ದು, ಕಾರಂಜಾ, ನಾಂಜರಾ, ಮಾಂಜರಾ ನದಿಗಳು ಹರಿಯುತ್ತವೆ. ಕಪ್ಪು, ಕೆಂಪು ಮಣ್ಣು ರೈತರಿಗೆ ಹವಾಮಾನಕ್ಕೆ ತಕ್ಕಂತೆ ಬೆಳೆ ನೀಡುತ್ತವೆ. ಇಂತಹ ಪರಿಸ್ಥಿತಿಯಲ್ಲಿಯೂ ರೈತರಿಗೆ ಬೆಂಬಲ ಬೆಲೆ ಸಿಗದ ಕಾರಣ ನಷ್ಟ ಅನುಭವಿಸುತ್ತಾರೆ ಎಂದರು.

ತಾಲೂಕಿನಲ್ಲಿ ೧೦ ಲಕ್ಷ ಎಕರೆ ಭೂಮಿ ಉಳುಮೆ ಮಾಡಲಾಗುತ್ತಿದೆ. ಇಲ್ಲಿನ ಮಣ್ಣಿನ ಶಕ್ತಿಯಿಂದ ತೋಟಗಾರಿಕೆ ಬೆಳೆ ಬೆಳೆಯಲೂ ಸಹಕಾರಿಯಾಗಿದೆ. ತಾಲೂಕಿನಲ್ಲಿ ಕೋಲ್ಡ್ ಸ್ಟೋರೇಜ್ ಯೋಜನೆ ರೂಪಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಇಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪಿಸಿ, ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಅನುಕೂಲ ಮಾಡಿ ಕೊಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎನ್‌ಎಚ್‌ಎಂ ಮತ್ತು ಆರ್‌ಕೆವಿವೈ ಯೋಜನೆಯಡಿ ಸಹಾಯಧನ ಪಡೆದ ರೈತ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಪುರಸಭೆ ಅಧ್ಯಕ್ಷೆ ಶಶಿಕಲಾ ಸಿಂಧನಕೆರೆ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಜಿಲ್ಲಾ ಉಪನಿರ್ದೇಶಕ ವಿಶ್ವನಾಥ ಜಿಳ್ಳೆ ಪ್ರಾಸ್ತಾವಿಕ ಮಾತನಾಡಿದರು. ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಾರುತಿ ಜಬನೂರ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.

ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೆರೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಹಣಮಂತರಾವ ಚವ್ಹಾಣ್, ವಿಜಯಕುಮಾರ ರಾಜಭವನ, ಬಸವರಾಜ ಹುಡಗೆ, ಶಾಲಿವಾನ ಪಾಟೀಲ್, ಓಂಪ್ರಕಾಶ ಮೋರೆ, ದೇವಿದಾಸ ಜ್ಯೋತಿಬಾ, ಸಂದೀಪ, ಪ್ರಶಾಂತ ಸಿರಗಿರೆ ಇತರರಿದ್ದರು.

ಮಾರುತಿ ಜಬನೂರ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಣೆ ಮಾಡಿದರು. ಓಂಕಾರ ಮೋರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net