ಬೆಳೆಗಾರರಿಂದ ಅನಿರ್ದಿಷ್ಟಾವಧಿ ಧರಣಿ

13 yelandur 01
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಉಪ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
Published on

ಯಳಂದೂರು: ನಿಗದಿತ ಅವಧಿಯೊಳಗೆ ಕಬ್ಬು ಕಟಾವು ಮಾಡದಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕ್ರಮವನ್ನು ಖಂಡಿಸಿ ಬೆಳೆಗಾರರು ತಾಲೂಕಿನ ಮದ್ದೂರು ಗ್ರಾಮದಲ್ಲಿರುವ ಕಾರ್ಖಾನೆ ಉಪ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಈ ಭಾಗದಲ್ಲಿ ರೈತರು ಬೆಳೆದಿರುವ ಕಬ್ಬನ್ನು 12 ತಿಂಗಳೊಳಗೆ ಕಟಾವು ಮಾಡಬೇಕು. ಆದರೆ 16, 17 ತಿಂಗಳಾದರೂ ಕಬ್ಬನ್ನು ಕಟಾವು ಮಾಡಲು ಕಾರ್ಖಾನೆ ಸಿಬ್ಬಂದಿ ಅನುಮತಿ ನೀಡುತ್ತಿಲ್ಲ. ಇದರಿಂದ ಕಬ್ಬು ಒಣಗುತ್ತಿದ್ದು, ಇಳುವರಿ ಕಡಿಮೆಯಾಗಿ ರೈತರ ಆದಾಯದಲ್ಲಿ ಖೋತಾ ಆಗಲಿದೆ. ಅಲ್ಲದೆ ಅವಧಿ ಮೀರಿ ಕಬ್ಬು ಖರೀದಿಸುವುದರಿಂದ ಕಾರ್ಖಾನೆಗೆ ಸಕ್ಕರೆ ಅಂಶ ಹೆಚ್ಚಾಗಲಿದ್ದು, ಅವರಿಗೆ ಹೆಚ್ಚಿನ ಲಾಭವಾಗುತ್ತದೆ ಎಂದರು.

ಅಲ್ಲದೇ, ತರಗೂಲಿ ಹಣವನ್ನು ಜಮೀನಿಂದ ಮತ್ತೊಂದು ಜಮೀನಿಗೆ ಹೆಚ್ಚಳ ಮಾಡುವುದು, ಲಾರಿಗೆ ಸಾರಿಗೆ ವೆಚ್ಚವನ್ನು ರೈತರ ಗಮನಕ್ಕೆ ಬಾರದೆ ಅವರೇ ನಿರ್ಧರಿಸುವುದು, ಪ್ರತಿ ಟನ್‌ಗೆ ಸರ್ಕಾರ 3,020 ರೂ. ನಿಗದಿ ಮಾಡಿದೆ. ಆದರೆ ರೈತರಿಗೆ ಮುಂಗಡವಾಗಿ ಈಗ ಟನ್‌ಗೆ 2,500 ರೂ. ಮಾತ್ರ ನೀಡುತ್ತಿದೆ. ಉಳಿಕೆ ಹಣವನ್ನು ನಿಧಾನವಾಗಿ ನೀಡುತ್ತಿದ್ದು, ಇದರಿಂದ ಹತ್ತಾರು ಕೋಟಿ ರೂ. ಕಾರ್ಖಾನೆಗೆ ಉಳಿಕೆಯಾಗುತ್ತಿದ್ದು, ಇಲ್ಲೂ ರೈತರಿಗೆ ಮೋಸವಾಗುತ್ತಿದೆ. ಅಲ್ಲದೆ ಕಬ್ಬನ್ನು ಕಟಾವು ಮಾಡುವ ಕೂಲಿಯೂ ಹೆಚ್ಚಾಗಿದ್ದು ಇದನ್ನೂ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು. ±Ü

ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರೈತ ಸಂಘದ ಗೌಡಹಳ್ಳಿ ಸೋಮಣ್ಣ, ರಾಜಣ್ಣ, ಮಹೇಶ್, ಪುಟ್ಟಮಾದಪ್ಪ, ಸಂತೋಷ್, ಮಹಾದೇವಸ್ವಾಮಿ, ಶ್ರೀಕಂಠಸ್ವಾಮಿ, ಸಿದ್ದಲಿಂಗಸ್ವಾಮಿ, ಮದ್ದೂರು ಸೋಮು, ಸೋಮಶೇಖರ್, ರವಿ, ಗುರುಸಿದ್ದಪ್ಪ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net